ಅನುದಿನ‌ಕವನ-೪೫೬, ಕವಯತ್ರಿ: ಶೋಭಾ ಮಲ್ಕಿ ಒಡೆಯರ್ 🖋 ಹೂವಿನ ಹಡಗಲಿ, ಕವನದ ಶೀರ್ಷಿಕೆ: ಯುಗಾದಿ

🌿 ಯುಗಾದಿ 🌿


ಯುಗ – ಯುಗದ ಆದಿ
ಈ ಯುಗಾದಿ
ಪ್ರತಿ ವರುಷದ ಹೊಸ ಆರಂಭಕ್ಕೆ
ಬುನಾದಿ !
ಎಲ್ಲೆಲ್ಲೂ ಹಸಿರು ಕಂಗೊಳಿಸುತಿದೆ
ಕಣ್ಗಳಿಗೆ ಹಬ್ಬದ ನೋಟ
ಗಿಡ, ಬಳ್ಳಿ, ಹೂವು, ಎಲೆ, ಚಿಗುರೊಡೆದು ಘಮಿಸುತ್ತಿದೆ
ಇದು ಪ್ರಕೃತಿಯ ಆಟ !

ಒಣಗಿರುವ ಗಿಡ – ಮರ ಬಳ್ಳಿಗಳು
ಚಿಗುರು ಮೂಡಿ, ಹೂವು ಅರಳಿ
ಇಡೀ ಪರಿಸರವೇ ಕಣ್ಣಿಗೆ ಹೊಸತನ
ಹಚ್ಚ ಹಸುರಿನ ಬನ
ಎಲ್ಲೆಡೆ ರಮ್ಯ ಚೈತ್ರ ತಾಣ !

ಬಿರು ಬಿಸಿಲ ಧಗೆಯಲ್ಲಿ
ಮನೆಯೊಳಗೆ ಮನದೊಳಗೆ ತಂಪಿರಲೆಂದು
ಮಾವು – ಬೇವಿನೆಲೆಗಳ
ತಳಿರು ತೋರಣ
ಹಿರಿಯರ ಆಚರಣೆ ಅರ್ಥಪೂರ್ಣ !

ಕಹಿ ಮನದ ಘಟನೆ ತೊಡೆದು
ಮುಂದಿನ ಭವಿಷ್ಯವ ನೆನೆದು
ಮುಡಿಯಿಂದ ಅಡಿಯವರೆಗೂ
ಬೇವಿನೆಲೆಯ ಅಭ್ಯಂಜನದ ಜಳಕ
ಮೈ ಮನದೊಳಗೆ
ಸಂತೋಷದ ಪುಳಕ !

ಮಾವಿನ ಮರದಲಿ
ಕೋಗಿಲೆಯ ಇಂಪಿನ ಸ್ವರ
ಜಗದ ಸೃಷ್ಟಿಯ ಬೆಳವಣಿಗೆಗೆ ಬೇಕು
ಸೂರ್ಯನ ಬೆಳಕಿನ ಪ್ರಖರ
ಹಬ್ಬದ ಖುಷಿ ಪ್ರತಿ ಮನೆಯಲ್ಲೂ
ಸಂಭ್ರಮದ ಸ್ವರ !

ಹಳೆಯ ನೋವುಗಳೆಲ್ಲವ ಮರೆತು
ಹೊಸತನದಲ್ಲಿ ಬೆರೆತು
ಸಿಹಿ – ಕಹಿ, ನೋವು – ನಲಿವು
ಸಮ – ಸಮ ಸವಿಯುವುದೇ
ಬೇವು – ಬೆಲ್ಲ
ಒಬ್ಬರಿಗೊಬ್ಬರು ಸಹಬಾಳ್ವೆಯ ಅರ್ಥೈಸಿ
ಬಾಳ ಪುಟದಿ ಮುಂದೆ ಸಾಗುವುದೇ
ಸವಿ ಬೆಲ್ಲ !


-ಶೋಭಾ ಮಲ್ಕಿ ಒಡೆಯರ್ 🖋
ಹೂವಿನ ಹಡಗಲಿ
*****