ಬಳ್ಳಾರಿಯಲ್ಲಿ ಗಮನ ಸೆಳೆದ ಸೌಹಾರ್ಧ ಯುಗಾದಿ

ಬಳ್ಳಾರಿ, ಏ.3: ದೇಶದಲ್ಲಿ ಸ್ವಾರ್ಥ,
ಅಧಿಕಾರಕ್ಕಾಗಿ ಸಾಮರಸ್ಯ ಕದಡುವ ಘಟನೆಗಳು‌ ನಡೆಯುತ್ತಿದ್ದರೆ ನಗರದಲ್ಲಿ ಹಿರಿಯ ಸಾಹಿತಿಯೊಬ್ಬರು ಸೌಹಾರ್ಧ ಯುಗಾದಿ ಆಚರಿಸಿ ಗಮನ ಸೆಳೆದಿದ್ದಾರೆ.
ನಗರದ ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ ಅವರ ಕುಟುಂಬ ಈ ಬಾರಿಯೂ ಅನ್ಯ ಧರ್ಮೀಯರ ಮನೆಯಲ್ಲಿ ಸೌಹಾರ್ಧ ಯುಗಾದಿ ಆಚರಿಸಿ ಬಹುಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಇಲ್ಲಿನ ವಿದ್ಯಾನಗರದಲ್ಲಿ ವಾಸವಿರುವ ಡಾ. ಅಪ್ಪಗೆರೆ ಕುಟುಂಬ, ಶನಿವಾರ ಯುಗಾದಿ ಹಬ್ಬದ ಒಬ್ಬಟ್ಟು(ಹೋಳಿಗೆ) ಅಡುಗೆ ತಯಾರಿಸಿ ತಮ್ಮ ಮನೆಯ ಸಮೀಪದಲ್ಲಿರುವ ಕ್ರಿಶ್ಚಿಯನ್ ಧರ್ಮದ ನಿವೃತ್ತ ಎಸ್.ಐ ಪ್ರಭುದಾಸ್ ಅವರ ಮನೆಯ ಕುಟುಂಬದ ಸದಸ್ಯರೊಂದಿಗೆ ಸವಿಯುವ ಮೂಲಕ ಸಾಮರಸ್ಯವನ್ನು ಎತ್ತಿಹಿಡಿದರು.


ಮೂರು ವರ್ಷಗಳ ಹಿಂದೆ ಮುಸ್ಲಿಂ‌ ಕುಟುಂಬದ ಜತೆ ಯುಗಾದಿ ಹಬ್ಬ ಆಚರಿಸಿದ್ದರು. ಕೊರೋನಾ ಎರಡು ವರ್ಷ ಸೌಹಾರ್ಧ ಯುಗಾದಿ ಆಚರಣೆಗೆ ಅಡ್ಡಿಯಾಗಿತ್ತು.
ಎನ್. ಸರಸ್ವತಿ ಅಪ್ಪಗೆರೆ ಅವರು ತಮ್ಮ ಪತಿ ಡಾ. ವೆಂಕಟಯ್ಯ ಅವರ ಈ ಮಾದರಿ ಕಾರ್ಯಕ್ಕೆ ಹಲವು ವರ್ಷಗಳಿಂದ ಕೈ ಜೋಡಿಸುತ್ತಾ ಬಂದಿದ್ದಾರೆ.
ಹಿರಿಯ ಪತ್ರಕರ್ತ ಸಿ.ಮಂಜುನಾಥ ಪ್ರಭುದಾಸ್ ಅವರಿಗೆ ಪುಸ್ತಕಗಳನ್ನು ನೀಡುವ ಮೂಲಕ
ಸಾಹಾರ್ಧ ಯುಗಾದಿ ಆಚರಣೆಯನ್ನು ಬೆಂಬಲಿಸಿದರು.
ಈ ಸಂದರ್ಭದಲ್ಲಿ ಪ್ರಭುದಾಸ್ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.


*****