ಸಮ್ಮರಿನಲ್ಲೂ ಚೆಂದಕ್ಕೆ ತೊಟ್ಟ ಜಾಕೆಟ್ಟಿನಲ್ಲಿ ಹಿತವಾದ ಬೆವರು.
ಮೈಗಂಟಿದ ಮೋಹಕ ಗಂಧದಲಿ ಕರಗಿ ಗಾಳಿಯಲಿ ಹರಡುತ್ತ
ದಣಿದ ಘಮಲಿಗೆ ಸಿಕ್ಕು ಮಿಲನ,
ಬೆಂಗಳೂರಿನ ಕಡು ಮಧ್ಯಾಹ್ನ.
ಅಂಗಾತ ಚಾಚಿ ಮಲಗುವುದು, ಕಾವಲಿಯ ಮೈಮೇಲೆ
ಕಾಲು ನಿಡಿದುದ್ದ ನೀಡಿ, ಹೊರಳುವಂತೆ ಕಾಲ.
ಸೂರ್ಯ ಚಂದ್ರರೆಲ್ಲ ಗಾಜು ಗೋಡೆಗಳಾಚೆ ಬಂಧಿ,
ಏರ್‌ಕೂಲರಿನಲ್ಲಿ ಸದಾ ಶರದೃತು.
ಚಿಮ್ಮಿದೆಲ್ಲ ತೊರೆಯ ಕನಸು ಸಮುದ್ರ.
ಬತ್ತದೆ, ಇಂಗಿಳಿಯದೆ ನದಿಯಾದರೆ
ನಿತ್ಯ ಹರಿವಿಲ್ಲದೆ ಕೂಡಬಹುದು;
ಅಂದಹಾಗೆ, ಈ ಊರಿನ ದಾರಿ ಒನ್ ವೇ.
ದಿನಾಂತದಲಿ ಮೈಮುರಿದವರ ಹೊಕ್ಕಳು ಬೆಚ್ಚಗೆ.
ತಾಜಾ ಉಸಿರಲ್ಲಿ ನಿಟ್ಟುಸಿರು ಕರಗಿ, ಇರುಳಲ್ಲಿ ಹೊಸ ಸೂರ್ಯ.
ನಡುವೆಯೊಂದು ಕೋಳಿ ನಿದ್ದೆ, ಬಿಟ್ಟುಬಂದೂರ ನೆನಪು…
-ಚೇತನಾ ತೀರ್ಥ ಹಳ್ಳಿ, ಬೆಂಗಳೂರು
*****