ವೃದ್ಧಾಶ್ರಮ
ನಾನೀಗ ಒಂಟಿ ಜೀವ
ಜೀವಂತ ಶವ !
ಸಪ್ತಪದಿ ತುಳಿದವಳು ಈಗಿಲ್ಲ
ಹೋಗಿಹಳು ದೂರ ತೀರಕೆ
ಮರಳಿಬಾರದ ಲೋಕಕ್ಕೆ
ನಾನೀಗ ಒಂಟಿ ಜೀವ
ಒಂಟಿ ಜೀವನದ ಅನುಭವ
ಯಾವುದರಲ್ಲೂ ಇಲ್ಲ ಆಸೆ ಆಸಕ್ತಿ
ಆದರೂ ಬದುಕಲೇಬೇಕು
ದೇಹದೊಳಗಿರುವ ತನಕ ಶಕ್ತಿ
ಕೊನೆಗಾಲದಲ್ಲಿ ಮಕ್ಕಳು, ಮೊಮ್ಮಕ್ಕಳ ಜೊತೆಗಿರುವ ಆಸೆ
ಆಸರೆಯಾಗುತ್ತಾರೆನ್ನುವುದು ಭ್ರಮೆ ಮರೀಚಿಕೆ
ಬಂಧು – ಸಂಬಂಧಗಳೆಲ್ಲಾ ಬರೀ ಮಾತಲ್ಲಿ
ನಾಲಿಗೆಯಲ್ಲಿ !
ಹಸಿರೆಲೆಗೆ ಹಣ್ಣೆಲೆ ನಗೆಪಾಟಲು
ಕಾಲಚಕ್ರ ತಿರುಗದಿದ್ದೀತೆ ?
ಇಂದಿನ ಹಸಿರೆಲೆ
ನಾಳೆ ಹಣ್ಣೆಲೆ
ಇದು ಕಲಿಗಾಲ ಈ ಕಾಲ
ಯಾರಿದ್ದರೇನು ?
ಇರದಿದ್ದರೇನು ?
ನಾನು ಬದುಕುತ್ತಿರುವೆ ಸಂತಸದಲ್ಲಿ
ನನ್ನಂತೆ ಇರುವ
ಬಹುಜನರ ಮಧ್ಯದಲ್ಲಿ
ವೃದ್ಧಾಶ್ರಮದಲ್ಲಿ.
-ಶೋಭಾ ಮಲ್ಕಿ ಒಡೆಯರ್🖊️ ಹೂವಿನ ಹಡಗಲಿ
*****