ಅನುದಿನ‌ ಕವನ-೪೬೮, ಕವಿ: ಡಾ. ನೆಲ್ಲಿಕಟ್ಟಿ ಎಸ್ ಸಿದ್ದೇಶ್, ಶಂಕರಘಟ್ಟ, ಶಿವಮೊಗ್ಗ, ಕವನದ ಶೀರ್ಷಿಕೆ: ಆತ್ಮಗೌರವದ ಆದಿತ್ಯ

ಆತ್ಮಗೌರವದ ಆದಿತ್ಯ

ಆತ್ಮಗೌರವದ ಆದಿತ್ಯ
ಅಂಬರಕ್ಕೆ ಹಾರಿ,
ನೆಲದ ಉರಿಗೆ ಬೆಚ್ಚಿಬಿದ್ದು
ಉರಿಯ ಹುಟ್ಟಾಡಗಿಸಲು
ಹೋರಾಡಿದ ಧೀರನೇ||
ಭಾರತದೊಳಗಿನ ಭಗ್ನಕ್ಕೆ
ಮಾನವೀಯತೆಯ ಕವಚ ತೊಡಿಸಿ
ಬಾಂಧವ್ಯದ ಬೆಸುಗೆಯಲ್ಲಿ
ಭವ್ಯ ಭಾರತದ ಕನಸ್ಸು ಕಂಡು
ನನಸ್ಸಾಗಲು ಹಗಲಿರುಳು
ಹೋರಾಡಿದ ವೀರನೇ||
ಅಕ್ಷರವೇ ಅಭಿವೃದ್ಧಿಗೆ ಪಥ
ಅಕ್ಷರವೇ ಆನಂದಕ್ಕೆ ಸತ್ಪಥ
ಅಕ್ಷರವೇ ಅನಾಥತೆಗೆ ಪ್ರತಿಘಾತ
ಅಕ್ಷರವೇ ಅಹಿತಕ್ಕೆ ಆಘಾತವೆಂದು
ಅಕ್ಷರಕ್ಕೆ ಆದ್ಯತೆ ನೀಡಿದ ಕಲ್ಪವೃಕ್ಷವೇ||
ಸಂಘಟನೆಯೇ ಸಂತಸಕ್ಕೆ ಸರಿದಾರಿ
ಸಂಘಟನೆಯೇ ಸಂತೃಪ್ತಿಗೆ ಹೆದ್ದಾರಿ
ಸಂಘಟನೆಯೇ ಸಂಪನ್ನತೆಗೆ ಮಹಾ ದಾರಿ
ಸಂಘಟನೆಯೇ ಸಂಪರ್ಕಕ್ಕೆ ಸಹಕಾರಿಯೆಂದು
ಸಾವರಿಸಿದ ಸನ್ಮಾರ್ಗದ ಸರದಾರನೇ ||
ಹೋರಾಟವೇ ಕ್ರೂರಿಗೆ ಚೂರಿ
ಹೋರಾಟವೇ ಅಸಮತೆಗೆ ಹೆಮ್ಮಾರಿ
ಹೋರಾಟವೇ ಮನುಷ್ಯತ್ವಕ್ಕೆ ನಿಜದಾರಿ
ಹೋರಾಟವೇ ಹಸಿವಿನ
ಸಾಮ್ರಾಜ್ಯದ ವೈರಿಯೆಂದು
ಹೋರಾಟದ ಅಸ್ತ್ರನೀಡಿದ
ಅನರ್ಘ್ಯ ಅಕ್ಷರಜ್ಞನೇ||
ಅಕ್ಷರವ ಅರಿತು,
ಸಂಘಟನೆಯ ಸದಾಶಯದಲ್ಲಿ
ಹೋರಾಟದ ಜಯದೊಳಗೆ ಬೆರೆತು
ಹಾರಾಡುವ ತೂರಾಡುವ
ದೆವ್ವಭೂತಗಳಿಗೆ ನೇಣ್ಹಾಕಿ
ನಡೆದಾಡುವ, ನಲಿದಾಡುವ ಬುದ್ಧರಾಗಿರೆಂದ
ಮೇಘನಾದವೇ,
ಮನುಕುಲದ ಮಕುಟವೇ||
ಅಕ್ಷರವೆಂಬ ಹಣತೆಯೊಳಗೆ
ಸಂಘಟನೆಯೆಂಬ ಎಣ್ಣೆಯ ತುಂಬಿ
ಹೋರಾಟವೆಂಬ ಬತ್ತಿಯ ನೆನೆಯಿಸಿ
ಆತ್ಮಾಭಿಮಾನ, ಸ್ವಾಭಿಮಾನದ
ನೀತಿನಿಯತ್ತಿನ
ಬೆಳಕನ್ಹೊತ್ತಿಸಿದ ಮಹಾಬೆಳಕೇ||
ಮಂಕು ಕವಿಯುವ ಮುನ್ನ
ಮಲಿನವಾಗುವ ಮುನ್ನ
ಮನೋಜಾಡ್ಯರಾಗುವ ಮುನ್ನ
ಅಂಬರದೊಳಗಿನ ಅಂಬೇಡ್ಕರ್
ಇಳಿದು ಬಾ, ಇಳಿದು ಬಾ
ಇಳೆಯ ಕೊಳೆಯ
ತೊಳೆಯು ಬಾ..||
ಜಾತಿ ನೀತಿಯೊಳಗೆ
ವರ್ಣ ಗುಣದೊಳಗೆ
ವರ್ಗ ಸನ್ಮಾರ್ಗದೊಳಗೆ
ಕರಗಿಸಿ, ಜೀವಜಲವಾಗಿಸು ಬಾ
ಜಲನಿಧಿಯೇ,
ಆತ್ಮಗೌರವದ ಆದಿತ್ಯ
ಇಳಿದು ಬಾ, ಇಳಿದು ಬಾ
ಇಳೆಯ ಕೊಳೆಯ ತೊಳೆಯು ಬಾ…||

-ಡಾ. ನೆಲ್ಲಿಕಟ್ಟೆ ಎಸ್.ಸಿದ್ದೇಶ್                                   ಸಹ ಪ್ರಾಧ್ಯಾಪಕರು
ಕನ್ನಡಭಾರತಿ , ಕುವೆಂಪು ವಿಶ್ವವಿದ್ಯಾನಿಲಯ
ಜ್ಞಾನಸಹ್ಯಾದ್ರಿ, ಶಂಕರಘಟ್ಟ-577451                 *****