ಸಾಮಾನ್ಯ ಮಹಿಳೆಯೂ ಸಚಿವೆ, ಇದು ಅಂಬೇಡ್ಕರ್ ರಚಿಸಿದ ಸಂವಿಧಾನದ ಶಕ್ತಿ: ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಶಶಿಕಲಾ ಜೊಲ್ಲೆ

ಹೊಸಪೇಟೆ(ವಿಜಯನಗರ),ಏ.14: ಒಬ್ಬ ಸಾಮಾನ್ಯ ಮಹಿಳೆಯು ಸಹ ಇಂದು ರಾಜ್ಯದ ಸಚಿವೆಯಾಗುತ್ತಿದ್ದಾಳೆ ಎಂದರೆ ಅದಕ್ಕೆ ಕಾರಣ ಭಾರತರತ್ನ  ಡಾ.ಬಿ.ಆರ್.ಆಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಶಕ್ತಿಯಿಂದ ಎಂದು ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ ಅವರು ಹೇಳಿದರು.
ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನಗರಸಭೆ ಹೊಸಪೇಟೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಜೈಭೀಮ್ ವೃತ್ತದದಲ್ಲಿ ಗುರುವಾರ ಏರ್ಪಡಿಸಿದ್ದ ಮಹಾನ್ ಮಾನವತವಾದಿ, ಸಂವಿಧಾನಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ರವರ 131ನೇ ಜನ್ಮ ದಿನಾಚರಣೆ ಹಾಗೂ ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ರವರ 115ನೇ ಜನ್ಮ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರರಾಗಿರುವ ಡಾ.ಬಾಬು ಜಗಜೀವನ್ ರಾಂ ಅವರ ಜಯಂತಿಯನ್ನು ವರ್ಷಕೊಮ್ಮ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಆಚರಿಸವುದಕ್ಕೆ ಮಾತ್ರ ಸೀಮಿತಗೊಳಿಸದೆ ಅವರ ಆದರ್ಶಗಳನ್ನು ನಮ್ಮ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ನಮ್ಮ ಮಕ್ಕಳಿಗೆ ಸಹ ಇವರ ಜೀವನದ ಚರಿತ್ರೆಯ ಬಗ್ಗೆ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದರು.
ಪ್ರತಿಯೊಬ್ಬರು ಜೀವನದಲ್ಲಿ ಈ ಇಬ್ಬರು ಧೀಮಂತ ಆದರ್ಶ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.
ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್‍ಸಿಂಗ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ 130ಕೋಟಿ ಭಾರತೀಯರಿಗೆ ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿದ ಸಂವಿಧಾನವೇ ಧರ್ಮಗ್ರಂಥ ಎಂದರು.


ದೇಶದ ಸಂವಿಧಾನ ಅತ್ಯದ್ಭುತ ಎಂದು ಬಣ್ಣಿಸಿದ ಆನಂದಸಿಂಗ್ ಅವರು ನಮ್ಮ ಶ್ರೇಷ್ಟ ಸಂವಿಧಾನದಲ್ಲಿನ ತತ್ವಾದರ್ಶಳಿಂದ ವಿದೇಶಿಯರು ಆಕರ್ಷಿತಗೊಂಡು ತಮ್ಮ ಸಂವಿಧಾನದಲ್ಲಿ ಪ್ರಮುಖ ತತ್ವಗಳನ್ನು ಅಳವಡಿಸಿಕೊಳ್ಳುತ್ತಿವೆ ಎಂದು ಹೇಳಿದರು.
ಶಿಕ್ಷಣ, ಸಂಘಟನೆ, ಹೋರಾಟಗಳು ಅಂಬೇಡ್ಕರ್ ಆದ್ಯತೆಯ ಮೂರುಮಂತ್ರಗಳು ಎಂದು ತಿಳಿಸಿದರು.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ವಿಭಾಗದ ನಿರ್ದೇಶಕಿ ಡಾ.ಲಕ್ಷ್ಮೀದೇವಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಉಪನ್ಯಾಸಕ ಡಾ.ಗುರುಬಸವರಾಜ ಬಿ.ಹೆಚ್.ಎಂ ಅವರು ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮರವಣಿಗೆ: ಜಯಂತಿಯ ಪ್ರಯುಕ್ತ ಭೀಮ ಜ್ಯೋತಿಯನ್ನು ಬಳ್ಳಾರಿ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬಸ್ ನಿಲ್ದಾಣದ ಮೂಲಕ ಜೈ ಭೀಮ್ ವೃತ್ತದವರೆಗೆ ಮೆರವಣಿಗೆ ಮೂಲಕ ತರಲಾಯಿತು.
ಇದೇ ಸಂದರ್ಭದಲ್ಲಿ ನಗರಸಭೆಯ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಅಂತರ್ಜಾತಿ ವಿವಾಹವಾದವರಿಗೆ, ದೇವದಾಸಿ ಮಕ್ಕಳನ್ನು ಮದುವೆಯಾದವರಿಗೆ ನಿಶ್ಚಿತ ಠೇವಣಿ ಬಾಂಡ್‍ಗಳನ್ನು ಈ ಸಂದರ್ಭದಲ್ಲಿ ನೀಡಲಾಯಿತು.
2020-21ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷೆ ಸುಂಕಮ್ಮ, ಹುಡಾ ಅಧ್ಯಕ್ಷ ಅಶೋಕ್ ಜೀರೆ, ಜಿಲ್ಲಾಧಿಕಾರಿ ಅನಿರುದ್ಧ್ ಪಿ.ಶ್ರವಣ್, ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣ ರಾವ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಅರುಣ್, ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ತಹಶೀಲ್ದಾರ್ ವಿಶ್ವಜಿತ ಮೆಹತ, ಸಮಾಜದ ಮುಖಂಡರು. ಇದ್ದರು.
*****