ಅನುದಿನ ಕವನ-೪೭೧, ಕವಯತ್ರಿ:ಡಾ. ಲಾವಣ್ಯ ಪ್ರಭ, ಮೈಸೂರು, ಕವನದ ಶೀರ್ಷಿಕೆ: ಬಾ ಮಳೆಯೇ ಬಾ

ಬಾ ಮಳೆಯೇ ಬಾ

ಕಳೆದ ಸಾರಿ ಹೀ…ಗೇ…ಬಂದು
ಹಾಗೆ ಹೋದವನು
ಮತ್ತಿದೇ ಸಮಯಕ್ಕೆ ಬಂದೇ ಬರುವಿಯೆಂಬ
ಕಣ್ಣ ಕಾತರದಲ್ಲಿದೆ
ಮಳೆ‌ನಕ್ಷತ್ರದ ಚಾತಕಪಕ್ಷಿ.

ಹೊಸ್ತಿಲಲಿ ನಿಂತೇ ಕನವರಿಕೆಗಳಲಿ
ನಾನು ಹಾಡುವ ನಿನ್ನ ಹಾಡು
ಕೇಳುತ್ತಿಲ್ಲವೇ ಗೆಳೆಯಾ?
ಬತ್ತುತ್ತಿರುವ ನದಿಗಂತೂ
ನಿನ್ನದೇ ಧ್ಯಾನ, ಗೊತ್ತೇ?

ಯಾಕಾಗಿ ಈ ಕಣ್ಣಾಮುಚ್ಚಾಲೆಯಾಟ?
ಯಾರಿಗಿದೆ ಸಂತಸ?
ಗಿಡಗಂಟಿ ಪ್ರಾಣಿಸಂಕುಲ ಮತ್ತೆ….ನಾನು!
ನೋಡಬಹುದೇ ಆ ಸಂಕಟ?
ಸಾಕುಸಾಕಿನ್ನು ಧೂರ್ತಹಠ
ನಿನಗಾದರೂ ನೆಮ್ಮದಿಯೇ?

ಇಳಿದು ಬಾ ಗೆಳೆಯಾ ,ಇಳಿದು ಬಾ
ಬಾ ಮಳೆಯೇ ಬಾ
ಕರುಣೆಯಿರಲಿ ನಿನ್ನವರಲ್ಲಿ.

-ಡಾ.ಲಾವಣ್ಯ ಪ್ರಭ, ಮೈಸೂರು
*****