ಈಗೀಗ ತೀರಾ ಕಷ್ಟವಾಗುತ್ತಿದೆ
ಈಗೀಗ ತೀರಾ ಕಷ್ಟವಾಗುತ್ತಿದೆ
ನನ್ನ ಬಲಗಣ್ಣು
ತಾನು ನೋಡ್ತಿರೋದೇ ಸರಿ ಅಂತಿದೆ
ನನ್ನ ಎಡಗಣ್ಣು
ತಾನು ನೋಡ್ತಿರೋದೇ ಸರಿ ಅಂತಿದೆ
ಈಗ ಎರಡೂ ವಿರುದ್ಧ ದಿಕ್ಕಿಗೆ
ನೋಡ್ತಿರೋದರಿಂದಲೇ
ನಾನು ಯಾವುದನ್ನೂ
ನೆಟ್ಟಗೆ ನೋಡಲಿಕ್ಕಾಗ್ತಿಲ್ಲ
–
ಈಗೀಗಾ ತೀರಾ ಕಷ್ಟವಾಗುತ್ತಿದೆ
ನನ್ನ ಬಲಗಿವಿ
ತಾನು ಕೇಳಿಸಿಕೊಳ್ತಿರೋದೇ ಶ್ರೇಷ್ಠ ಅಂತಿದೆ
ನನ್ನ ಎಡಗಿವಿ
ತಾನು ಕೇಳಿಸಿಕೊಳ್ತಿರೋದೇ ಶ್ರೇಷ್ಠ ಅಂತಿದೆ
ಈಗ ಎರಡೂ ಬೇರೆ ಬೇರೆ
ಕೇಳಿಸ್ಕೊಳ್ತಿರೋದ್ರಿಂದಲೇ
ನಾನು ಯಾವುದನ್ನೂ
ಸರಿಯಾಗಿ ಕೇಳಿಸಿಕೊಳ್ಳಲಾಗ್ತಿಲ್ಲ
–
ಈಗೀಗ ತೀರ ಕಷ್ಟವಾಗುತ್ತಿದೆ
ನನ್ನ ಮೂಗಿನ ಬಲಭಾಗ
ನಾನಷ್ಟೇ ಸರಿಯಾಗಿ ಉಸಿರಾಡ್ತಿರೋದು ಅದರಿಂದಲೇ ಬದುಕಿರೋದು ಅಂತಿದೆ
ನನ್ನ ಮೂಗಿನ ಎಡಭಾಗ
ನಾನಷ್ಟೇ ಸರಿಯಾಗಿ ಉಸಿರಾಡ್ತಿರೋದು ಅದರಿಂದಲೇ ಬದುಕಿರೋದು ಅಂತಿದೆ
ಈಗ ಎರಡೂ ಹಟ ಹಿಡಿದಿರೋದರಿಂದ
ಒಮ್ಮೊಮ್ಮೆ ಉಸಿರಾಟ
ಏರುಪೇರಾಗ್ತಿದೆ
–
ಈಗೀಗ ತೀರ ಕಷ್ಟವಾಗುತ್ತಿದೆ
ನನ್ನ ಬಲಗೈ ನನ್ನಿಂದಲೇ ನಿನ್ನ ಜೀವನ ಅಂತಿದೆ
ನನ್ನ ಎಡಗೈ ನನ್ನಿಂದಲೇ ನಿನ್ನ ಜೀವನ ಅಂತಿದೆ
ಈಗ ಎರಡೂ ಒಂದಕ್ಕೊಂದು
ಹೊಡೆದಾಡ್ತಿರೋದರಿಂದ
ನಾನು ಯಾವ ಕೆಲಸವನ್ನೂ ಮಾಡಲಾಗ್ತಿಲ್ಲ
–
ಈಗೀಗ ತೀರ ಕಷ್ಟವಾಗುತ್ತಿದೆ
ನನ್ನ ಬಲಗಾಲು ನಾನೇ ಯಾವಾಗಲೂ ಮುಂದೆ ಅಂತಿದೆ
ನನ್ನ ಎಡಗಾಲು ನನ್ನ ನಂತರ ನೀನು ಅಂತಿದೆ
ಈಗ ಎರಡೂ ಗರ್ವದಿಂದ ಆಚೀಚೆ ಹೋಗ್ತಿರೋದರಿಂದ
ನನಗೆ ನಡಿಗೆಯೇ ಕಷ್ಟವಾಗ್ತಿದೆ
–
ನಿಜ ಈಗೀಗ ತೀರ ಕಷ್ಟವಾಗುತ್ತಿದೆ
ಒಂದೇ ನೋಟ, ಒಂದೇ ಕೇಳುವಿಕೆ,
ಒಂದೇ ಉಸಿರಾಟ, ಒಂದೇ ಕೆಲಸ
ಒಂದೇ ಸಮ ನಡಿಗೆ ಇದ್ದದ್ದು
ಯಾಕೆ ಹೀಗಾಗ್ತಿದೆ ?
ಎಲ್ಲಿ ತಪ್ಪಾಗ್ತಿದೆ ?
ಒಂದು ಎಂಬುದು ಎರಡಾಗಿ
ಛಿದ್ರ ಛಿದ್ರವಾಗಿ
ಬದುಕೇ ಮೂರಾಬಟ್ಟೆಯಾಗುವಂತಿದೆ
ನಿಜ ಹೇಳ್ತೀನಿ
ಈಗೀಗ ತೀರ ಕಷ್ಟವಾಗುತ್ತಿದೆ
-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿಲ್ಲೆ
*****