ಆಲದ ಮರ
ಆಲದ ಮರ
ಮಣ್ಣಿಗೆ ಬೇರಿನಿಂದಷ್ಟೇ ಅಲ್ಲ
ಬಿಳಿಲುಗಳೂ ಮಣ್ಣ ಆಸರೆಯ ಬೇಡಿ
ಹೆಜ್ಜೆ ಮೇಲೊಂದ್ ಹೆಜ್ಜೆನಿಟ್ಟು
ಎಪ್ಪತ್ತೈದೂ ವಸಂತಗಳ ಪೂರೈಸಿದೆ
ಎಳೆವೆಯಲ್ಲೇ
ಉದುರಿದ ಹಸಿರು ಎಲೆಗಳು
ಹೋರಾಟದ ಹಾದಿಯೊಳು
ಆಯಸ್ಸನ್ನು ಪೂರ್ಣಗೊಳಿಸದೇ ಮಣ್ಣಾದ ಎಲೆಗಳು
ಮಣ್ಣ ಋಣ ಕಳೆದುಕೊಂಡು ಮುದಿ ಎಲೆಗಳು
ಹೀಗೆ ಹಲವು ವಸಂತಗಳ
ಆಲದ ಹೆಜ್ಜೆಗಳಲ್ಲಿ ಬಣ್ಣ ತುಂಬಿದವು
ಬೇರುಗಳು
ಈ ಬೆಳವಣಿಗೆಗೆ ನಾವೇ ಕಾರಣವೆಂದು
ಹಮ್ಮಿನಿಂದ ಬೀಗುವುದ ಕಂಡು
ಎಲೆಗಳು,ಬಿಳಿಲುಗಳು ಬಿಕ್ಕುತ್ತಿವೆ
ಗಂಟಲಿನಲ್ಲೇ ಸಿಕ್ಕು
ಹೊರಬಾರದೇ ತೊಳಲಾಡುವ ಮಾತುಗಳಂತೆ
ಆಸರೆ ಬೇಡಿ ಬಂದ ಪಕ್ಷಿ ಪ್ರಾಣಿಗಳೂ
ರೆಂಬೆ ಕೊಂಬೆಗಳಿಲ್ಲದಿರೆ ಮರವೇ?
ಕುಹಕವಾಡಲು
ಬೇರು, ಬಿಳಿಲುಗಳ ಕೇಳಿಯೂ ಕೇಳದ
ಜಾಣ ಕಿವುಡುತನ
ಜಗಳದಳಗೊಂದು ಜಗಳವಾಗಿ
ಮರಿ ಶಾಖೆಗಳು ತಾವೇ ಶ್ರೇಷ್ಠವೆಂಬ ಘೋಷಣೆ
ಯಾರು ಮುಖ್ಯರೋ ಯಾರು ಅಮುಖ್ಯರೋ?
ಬೇರು ಬಿಳಿಲು ರೆಂಬೆ ಕೊಂಬೆಗಳ
ಒಳ ಜಗಳ ತಾರಕಕ್ಕೇರಿದೆ
ಬೆಳಕ ಹೀರಿದ ರೆಂಬೆಕೊಂಬೆಗಳೇ
ಮಣ್ಣ ಸತ್ವ ಜೀವಜಲ ಹೀರಿದ ಬೇರುಗಳೇ
ಎಲ್ಲರ ಸಾಕಿ ಸಲುಹಿದ ಎಲೆಗಳೇ
ಯಾರು ಮುಖ್ಯರೋ ಯಾರು ಅಮುಖ್ಯರೋ?
ಮರದಡಿ ಕುಳಿತ ಲಂಡಪಂಚೆಯ
ಮುದುಕನ ಕಣ್ಣೀರು
ಅದೆಲ್ಲಿ ಎಡವಿದೆ ನಾನು
ಮುಳ್ಳು ಬೇಲಿಯ ಕಟ್ಟಿ ಇದರ ಕಾವಲು ಕಾದಿರುವುದೇ
ರೆಂಬೆ ಕೊಂಬೆ ಕಡಿಯ ಬಂದ ಪರಕೀಯರ
ಹಿಮ್ಮೆಟ್ಟಿಸಿದುದೇ
ಅಲವತ್ತುಕೊಳ್ಳುವ ಎಲುಬು ಹಂದರವದು
ಉತ್ತರಕ್ಕಾಗಿ ಆಗಸದೆಡೆ ಮುಖ ಮಾಡಿತು
-ಮಹಮ್ಮದ್ ರಫೀಕ್ ಕೊಟ್ಟೂರು,
ವಿಜಯನಗರ ಜಿಲ್ಲೆ
*****