ಋಣಾನುಬಂಧ
(ಭಾಮಿನಿ ಷಟ್ಪದಿಯಲ್ಲಿ)
ಆವ ಜನ್ಮದ ಮೈತ್ರಿ ಕಾಣೆನು
ಯಾವ ಪುಣ್ಯದ ಫಲವು ತಿಳಿಯೆನು
ನಾವು ಬಂದೆವು ಬುವಿಗೆ ಸತಿಪತಿ ಪಟ್ಟ ಪಡೆಯುತಲಿ|
ಕಾವ ದೇವನ ಸೃಷ್ಟಿ ಲೀಲೆಗೆ
ಸಾವತನಕವು ಜೊತೆಗೆ ಬಾಳಲು
ಭಾವ ಬಂಧುರ ಬೆಸೆದುಬಿಟ್ಟನು ತನ್ನ ನಿಯಮದಲಿ||
ಆವ ಪೂಜೆಗೆ ಕೊಟ್ಟ ವರವೋ
ಯಾವಕಾರ್ಯಕೆ ಕೊಟ್ಟ ಫಲವೋ
ನಾವು ಜೀವನಮಾಡಿ ಚಂದದಿ ಜಗದಿ ಬದುಕುತಲಿ|
ಕಾವನಿತ್ತನು ನಮಗೆ ಕಾಯಕ
ಬೇವುಬೆಲ್ಲದ ಹಾಗೆ ಬರುತಲಿ
ನೋವುನಲಿವವು ದಿನವು ಬೆರೆತವು ಕಷ್ಟ ಪಡುತಿರಲು||
ಮಗಳ ಬೆಳೆಸುತ ಮರೆತುಯೆಲ್ಲವ
ಸಿಗುವ ಸಂತಸಪಡೆದುಕೊಳ್ಳುತ
ಮಿಗಿಲು ನಮ್ಮಯ ಬದುಕುತಿಳಿದೆವು
ಮುಗಿಲ ನೋಡದೆಯೆ|
ನಗುತ ಸಾಗಿಸಿ ಕಷ್ಟ ಜೀವನ
ಜಗಳವಾಡುತ ಮತ್ತೆಕಲೆಯುತ
ಜಗದಿಕಳೆದೆವು ದಶಕಜೋಡಿಯು ಜೊತೆಗೆ ಮತ್ತೆರೆಡು||
-ಧರಣೀಪ್ರಿಯೆ, ದಾವಣಗೆರೆ
*****