ಅನುದಿನ ಕವನ-೪೮೦, ಕವಿ: ಮಧುರ ಚೆನ್ನ (ಎಸ್.ಮಂಜುನಾಥ್) ಬೆಂಗಳೂರು, ಕವನದ ಶೀರ್ಷಿಕೆ: ಒಂದು ಹನಿ ಕರುಣ

ಒಂದು ಹನಿ ಕರುಣ

ಗುಬ್ಬಿ ಗೂಡಲ್ಲಿಂದು ಮತ್ತೆ
ಮಬ್ಬು ಆವರಿಸಿತೋ
ಇಟ್ಟೆರಡು ಮೊಟ್ಟೆಗಳು
ನಟ್ಟಹಗಲಲಿ ಕಳುಯಿತೋ…

ನಮ್ಮ ಮೈಯಿಗೆ
ನಿಮ್ಮ ತೊಗಲ ಅಂಟಿಸಿಕೊಂಡವರಲ್ಲಯ್ಯ ನಾವು
ನಮ್ಮ ಉಸಿರಿಗೆ
ನಿಮ್ಮ ಹೆಸರನೇನು ಪೂಸಿಕೊಂಡವರಲ್ಲಯ್ಯ ನಾವು
ಆದರೇಕೋ
ನಿಮ್ಮ ತೆಮರಿಗೆಮ್ಮ ನೆತ್ತರ ಬಸಿದುಕೊಂಡಿರಯ್ಯ ನೀವು…

ಒಡೆದ ಮೊಟ್ಟೆಯ ಕಂಗಳ
ಸತ್ವವನೇ ತೆಗೆದು ಪಡಿಮೂಡಿಸಿದರೆ ಅಯ್ಯಾ
ನಿಮಗಾಗಿ ಕರುಣವನೇ ಸೂಸುತ್ತದೆ
ನಮ್ಮ ತಟ್ಟೆಯ ಸಗಣಿ ಗಂಜಲ
ನಿಮ್ಮ ದೃಷ್ಟಿ ನೀವಾಳಿಸುತ್ತಿರೆ ಅಯ್ಯಾ
ನಿಮ್ಮ ಮೈಮನಸ್ಸುಗಳೇ ಕುರುಡಾಗುತ್ತಿದೆ.

ಸಾಗರದೆಲ್ಲಾ ನೀರನು ಬಾವಿಗೆ ತುಂಬಿ
ಬಾವಿಯ ನೀರನು ಬಿಂದಿಗೆಗೆ ತುಂಬಿ
ಬಿಂದಿಗೆಯ ನೀರನೊಂದು ಚೊಂಬಲಿ ಮೊಗೆದು
ಬಚ್ಚಲಿಗೆ ಸುರಿದಂತೆ ನಿಮ್ಮ
ಆಚಾರವಿಚಾರಗಳು ಕೊಳಕಾಗಿರಲು ಅಯ್ಯಾ…
ಜಲಗಾರರು ನಾವು ಬರುತ್ತೇವೆ
ಬಚ್ಚಲಬಾಯಿಗಳಿಂದಿಡಿದು
ನಿಮ್ಮ ಎಚ್ಚರಗಳನ್ನೂ ತೊಳೆಯುತ್ತೇವೆ
ನಿಮ್ಮ ಪಾಪಗಳನು ನೀವೆ ಮೇಯುವವರೆಗೂ
ಬೆಳೆಯುತ್ತೇವೆ.

-ಮಧುರ ಚೆನ್ನ                              (ಎಸ್.ಮಂಜುನಾಥ್) ಬೆಂಗಳೂರು


*****