ಹೊಸಪೇಟೆ, ಏ.30: ನಗರದ ಶ್ರೀ ಶಂಕರ್ ಆನಂದ್ ಸಿಂಗ್ ಸರ್ಕಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ(ಪಿಜಿ) ಆರಂಭಕ್ಕೆ ಸಿದ್ಧತೆ ನಡೆದಿವೆ ಎಂದು ವಯೋನಿವೃತ್ತಿ ಹೊಂದಿದ
ಪ್ರಾಂಶುಪಾಲ ಡಾ.ಬಿ.ಜಿ ಕನಕೇಶ ಮೂರ್ತಿಅವರು ಹೇಳಿದರು.
ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಸಂಜೆ ತಮಗೆ ಕಾಲೇಜಿನ ಆದ್ಯಾಪಕರು, ಅತಿಥಿ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿತಗೊಂಡು ಅವರು ಮಾತನಾಡಿದರು.
ಹದಿನೈದು ವರ್ಷಗಳ ಹಿಂದೆ ಮುನಿಸಿಪಲ್ ಕಾಲೇಜಿನಲ್ಲಿ ಕೇವಲ ಎರಡು ಕೊಠಡಿ, ನಲವತ್ತು ವಿದ್ಯಾರ್ಥಿಗಳಿಂದ ಆರಂಭಗೊಂಡ ಪ್ರಥಮದರ್ಜೆ ಕಾಲೇಜು ಪ್ರಸ್ತುತ ಬೃಹತ್ ಕಟ್ಟಡ ನಿರ್ಮಾಣಗೊಂಡಿದ್ದು
ಕಾಲೇಜಿಗೆ ಎರಡು ತಿಂಗಳಲ್ಲಿ ನ್ಯಾಕ್ ಬಿ ಶ್ರೇಣಿ ಲಭಿಸುವ ವಿಶ್ವಾಸವನ್ನು ಡಾ.ಕನಕೇಶಮೂರ್ತಿ ವ್ಯಕ್ತಪಡಿಸಿದರು.
ಕಾಲೇಜಿನ ಅಭಿವೃದ್ಧಿಯಲ್ಲಿ ನಗರ ಶಾಸಕರೂ ಆಗಿರುವ ಸಚಿವ ಆನಂದ್ ಸಿಂಗ್ ಅವರ ವಿಶೇಷ ಕಾಳಜಿ, ಸಹಕಾರ, ಬೆಂಬಲವಿದೆ. ಪ್ರಸ್ತುತ ಕಾಲೇಜಿನಲ್ಲಿ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೇವಲ ಹದಿನೈದು ವರ್ಷಗಳಲ್ಲಿ ಇಷ್ಟೊಂದು ಪ್ರಗತಿ ಕಾಣುವಲ್ಲಿ ಹಿರಿಯ ಅಧ್ಯಾಪಕರು, ಅತಿಥಿ ಉಪನ್ಯಾಸಕರ ಶ್ರಮವೂ ಇದೆ. ಕಾಲೇಜಿನ ತೀವ್ರ ಬೆಳವಣಿಗೆಯನ್ನು ಗಮನಿಸಿದರೆ ಒಂದೆರಡು ವರ್ಷಗಳಲ್ಲಿ ಸ್ವಾಯತ್ತ ಮಾನ್ಯತೆ ಲಭಿಸುತ್ತದೆ ಎಂದು ಖಚಿತವಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ಶಾಸ್ತ್ರ ವಿಭಾಗದ ಹಿರಿಯ ಸಹ ಪ್ರಾಧ್ಯಾಪಕರೂ ಆಗಿರುವ ಪ್ರಭಾರಿ ಪ್ರಾಂಶುಪಾಲ ನಟರಾಜ್ ಪಾಟೀಲ್ ಅವರು ಮಾತನಾಡಿ, ಡಾ. ಕನಕೇಶ ಮೂರ್ತಿ ಅವರು ಪ್ರತಿಭಾವಂತ ಆಡಳಿತಗಾರರು. ದಿನದ 24 ಗಂಟೆಗಳನ್ನು ಕಾಲೇಜಿನ ಶ್ರೇಯಸ್ಸಿಗೆ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು.
ಆಂಗ್ಲ ವಿಭಾಗದ ಮುಖ್ಯಸ್ಥ ಡಾ. ಟಿ ಎಚ್ ಬಸವರಾಜ್ ಅವರು ಮಾತನಾಡಿ, ಡಾ. ಕನಕೇಶಮೂರ್ತಿ ಅವರು
ಹಿಡಿದ ಕೆಲಸವನ್ನು ಬಿಡದ ದೈತ್ಯರು. ತಮ್ಮ ಕನ್ನಡ ವಿಭಾಗವನ್ನು ಮಾದರಿ ವಿಭಾಗವನ್ನಾಗಿ ಕಟ್ಟಿದವರು ಎಂದು ಪ್ರಶಂಸಿಸಿದರು.
ಭಾರತದ ಸಂವಿಧಾನ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಅಧ್ಯಯನ ಮಾಡಿದ ಕಲ್ಯಾಣ ಕರ್ನಾಟಕದ ಮೂರ್ನಾಲ್ಕು ಜನರಲ್ಲಿ ಕಾಲೇಜಿನ ಅಧ್ಯಾಪಕ
ಡಾ. ಕೆ. ವೆಂಕಟೇಶ್ ಒಬ್ಬರು. ಕನ್ನಡ ಸಾಹಿತ್ಯ, ಮೌಲಿಕ ಪುಸ್ತಕ ಪ್ರಕಟಣೆಯಲ್ಲಿ ಪಲ್ಲವ ಪ್ರಕಾಶನದ ಕೊಡುಗೆ ಅಪಾರ ಎಂದರು.
ಡಾ. ಟಿ ವಿ ವಾರುಣಿ ಅವರಿಂದ ಶಿಸ್ತನ್ನು ಕಲಿತಿದ್ದೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿಗೆ ವರ್ಗಾವಣೆಗೊಂಡ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಕೆ. ವೆಂಕಟೇಶ್ ಮತ್ತು ಕೊಪ್ಪಳಕ್ಕೆ ವರ್ಗಾವಣೆಗೊಂಡ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಟಿ ವಿ ವಾರುಣಿ ಅವರನ್ನು ಕಾಲೇಜಿನ ಅಧ್ಯಾಪಕರು, ಅತಿಥಿ ಉಪನ್ಯಾಸಕರು, ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದರು.
ಕೊಪ್ಪಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಮಾರುತೇಶ ಅವರು ಮಾತನಾಡಿ, ಡಾ. ಕನಕೇಶ ಮೂರ್ತಿ ಅವರ ಶಿಸ್ತು, ದಕ್ಷತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅನುಭವಿ ಡಾ. ವೆಂಕಟೇಶ್ ಅವರು ಹಬೊ ಹಳ್ಳಿ ಕಾಲೇಜನ್ನು ವಿಶಿಷ್ಟವಾಗಿ ಬೆಳೆಸಲಿ.
ಡಾ. ವಾರುಣಿ ನಮ್ಮ ಕಾಲೇಜಿಗೆ ಬರುತ್ತಿರುವುದು ತಮಗೆ ಸಂತೋಷವಾಗಿದೆ ಸ್ವಾಗತಿಸುತ್ತೇನೆ ಎಂದರು.
ವಾಣಿಜ್ಯ ಶಾಸ್ತ್ರ ವಿಭಾಗದ
ಶಿವಪ್ಪ ಅವರು ಮಾತನಾಡಿ ಡಾ. ಕನಕೇಶ ಮೂರ್ತಿ ಅವರು 24×7 ಕೆಲಸಗಾರರು. ಇವರ ಶ್ರಮದಿಂದ ಕಾಲೇಜು ಬಹಳಷ್ಟು ಅಭಿವೃದ್ಧಿ ಹೊಂದಿದೆ ಎಂದು ಹೇಳಿದರು.
ಕನ್ನಡ ವಿಭಾಗದ ಡಾ. ಮೌನೇಶ ಬಡಿಗೇರ ಮಾತನಾಡಿ. ಡಾ. ಕನಕೇಶ ಮೂರ್ತಿ ಅವರು ನನ್ನ ವಿದ್ಯಾಗುರುಗಳು, ಕನ್ನಡ ಅಧ್ಯಾಪಕನಾಗಲು ಇವರೇ ಸ್ಪೂರ್ತಿ. ಹಬೊಹಳ್ಳಿ ಕಾಲೇಜಿನಲ್ಲಿ ಬೇರೆ ವಿಭಾಗದ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದರು ಎಂದು ಸ್ಮರಿಸಿದರು. ಡಾ. ವೆಂಕಟೇಶ್ ಅವರು ತಮ್ಮ
ಪಲ್ಲವ ಪ್ರಕಾಶನದ ಮೂಲಕ ಕನ್ನಡ ಕಟ್ಟಿದವರು ಎಂದರು.
ಗ್ರಂಥಪಾಲಕ ವೀರಭದ್ರಪ್ಪ ಮಾತನಾಡಿ, ನಗರದ ವಿದ್ಯಾರ್ಥಿಗಳ ಸೌಭಾಗ್ಯ. ನಾವು ಮನೆ ಕಟ್ಟಿಸಿದಂತೆ, ತಮ್ಮ ಮನೆ ಕಟ್ಟಿದಂತೆ ಕಾಲೇಜು ಕಟ್ಟಿಸಿದವರು ಡಾ. ಕನಕೇಶ ಮೂರ್ತಿ ಅವರು ಎಂದು ಹೇಳಿದರು.
ಡಾ. ವಾರುಣಿ ಮತ್ತು ಡಾ. ವೆಂಕಟೇಶ್ ಅವರು ಕಾಲೇಜಿನ ಅನುಭವ, ಸಹೋದ್ಯೋಗಿಗಳ ಸಹಕಾರ ನೆನೆದು ಗದ್ಗಿತರಾದರು.
ಡಾ. ವಾರುಣಿ ಅವರು, ವಾಣಿಜ್ಯ ವಿಭಾಗದ ಬೆಳವಣಿಗೆಗೆ ಪ್ರಾಂಶುಪಾಲರ
ಪ್ರೋತ್ಸಾಹ ಇತ್ತು. ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಡಾ. ವೆಂಕಟೇಶ್ ಉತ್ತಮ ವಾಗ್ಮಿ, ಸ್ನೇಹ ಜೀವಿ, ಉತ್ತಮ ಸಹೋದ್ಯೋಗಿಗಳನ್ನು ಕಳೆದು ಕೊಳ್ಳುತ್ತಿದ್ದೇನೆ ಎಂದು ದುಃಖಿಸಿದರು.
ಡಾ. ಕನಕೇಶ ಅವರ ಪುತ್ರ ಅಭಿಮಾನ್, ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಸಿ ಮಂಜುನಾಥ್,
ಹಬೊ ಹಳ್ಳಿ ಅತಿಥಿ ಉಪನ್ಯಾಸಕ ರವಿ ಮಾಲವಿ ಮಾತನಾಡಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಡಿ ಎಂ ಮಲ್ಲಿಕಾರ್ಜುನ ನಿರೂಪಿಸಿದರು.
ಡಾ. ರಘು ಪ್ರಸಾದ ಸ್ವಾಗತಿಸಿದರು. ಉಪನ್ಯಾಸಕಿ ಮೇಘನಾ ಪರಗಿ ಪ್ರಾರ್ಥಿಸಿದರು.
*****