ಅನುದಿನ ಕವನ-೪೮೭, ಕವಯತ್ರಿ: ವಾಣಿ ಲೋಕಯ್ಯ, ಮಂಗಳೂರು, ಕಾವ್ಯ ಪ್ರಕಾರ:ಗಜಲ್

ಗಝಲ್

ಮನದ ತೀರದಿ ನೂರು ಭಾವವು
ತೇಲಿ ಬರುತಿದೆ ನೋಡು
ಬನದ ಚಿಗುರಲಿ ವಸಂತ ಕೋಗಿಲೆ
ಮಧುರವಾಗಿ ಉಲಿದಿದೆ ನೋಡು

ಚಿವುಟಿದಷ್ಟು ಚಿಗುರಿ ಬೆಳೆವ
ಗರಿಕೆಗೆಳಿಗೆ ಯಾರ ಹಂಗಿದೆ ಹೇಳು
ಬೆಂದಷ್ಟು ಚಿನ್ನ ಕುಲುಮೆಯಲಿ
ಶುದ್ಧವಾಗಿ ಹೊಳೆದಿದೆ ನೋಡು

ತಾನುರಿದು ಲೋಕ ಬೆಳಗುವ ರವಿಗೆ
ದಿನವೆಲ್ಲ ನಮಿಸಬೇಕು
ಹೂವು ಮುಳ್ಳಿನ ಪಯಣ ಒಪ್ಪುತ
ಬದುಕು ಸಾಗುತಿದೆ ನೋಡು

ನಲಿವ ಸಮಯದಿ ಮುನಿಸು
ತೋರದೆ ಕಾಲ ಕಳೆದರೆಷ್ಟು ಸುಖ
ಬಾಳ ಗೀತೆಗೆ ಭೂಮಿ ಸ್ವರ್ಗದಂತೆ
ನೋವೆಲ್ಲ ಕಳೆದಿದೆ ನೋಡು

ಆಡದೆ ಉಳಿದ ಮಾತುಗಳು ವಾಣಿಯ
ಹೃದಯದೊಳಡಗಿದೆ
ಮಂದಹಾಸದ ಮೊಗದಲಿ ಸಂತಸದ
ಕಂಪು ಹರಡಿದೆ ನೋಡು

-ವಾಣಿ ಲೋಕಯ್ಯ, ಮಂಗಳೂರು

*****