ಒಮ್ಮೆ ಕ್ಷಮಿಸಿಬಿಡು ಅಣ್ಣ
ಕ್ಷಮಿಸಿಬಿಡು ಅಣ್ಣ
ಜಾತಿ, ಧರ್ಮಗಳ ಮೀರಿದ
ನಿನ್ನನ್ನು ಜಾತಿ, ಧರ್ಮಗಳ
ಮಧ್ಯೆ ಬಂದಿಯಾಗಿಸಿದ್ದಕ್ಕೆ,
ಸ್ಥಾವರಕ್ಕಳಿವುಂಟು ಎಂದ
ನಿನ್ನನ್ನೇ ಸ್ಥಾವರವನ್ನಾಗಿಸಿದ್ದಕ್ಕೆ
–
ಕ್ಷಮಿಸಿಬಿಡು ಅಣ್ಣ
ಎಲ್ಲರೊಳೊಂದಾಗಿರಬೇಕೆಂದ
ನಿನ್ನನ್ನೇ ದೇವರನ್ನಾಗಿಸಿ
ದೂರವಿರಿಸಿದುದಕ್ಕೆ
ನಿನ್ನ ಹೆಸರಿನ ಭಜನೆಯಿಂದಲೇ
ಹೊನ್ನು ಪಡೆಯುತಿರುವುದಕ್ಕೆ
–
ಕ್ಷಮಿಸಿಬಿಡು ಅಣ್ಣ
ನಿನ್ನನ್ನು ನಿನ್ನ ವಿಚಾರಗಳನ್ನೂ
ಅರಿಯದೆ ಅರಿವಿಲ್ಲದಂತೆ
ನಡೆಯುತ್ತಿರುವುದಕ್ಕೆ
ನಡೆ ನುಡಿ ಒಂದಾಗದಿರುವುದಕ್ಕೆ
–
ಕ್ಷಮಿಬಿಸಿಡು ಅಣ್ಣ
ನಿನ್ನ ವಚನಗಳ ಗರಿಗಳ
ಸಿಕ್ಕಿಸಿಕೊಂಡೇ ಇವನಮ್ಮವ
ಇವನಮ್ಮವ ಎಂದು
ಬಡಿದಾಡುತ್ತಿರುವುದಕ್ಕೆ
ನುಡಿಯೊಳಗಾಗಿ
ನಡೆಯದಿರುವುದಕ್ಕೆ
–
ಕ್ಷಮಿಸಿಬಿಡು ಅಣ್ಣ
ಆಗಸದಷ್ಟು ಎತ್ತರವಿರುವ
ನಿನ್ನನ್ನು ಯಾರಿಗೂ
ಕಾಣದಂತೆ ಗೋಡೆಗಳ ಮಧ್ಯೆ
ಬಚ್ಚಿಟ್ಟಿರುವುದಕ್ಕೆ
ಪ್ರೀತಿಯನ್ನೇ ತುಂಬಿಕೊಂಡ
ನಿನ್ನ ವಚನಗಳನ್ನು
ಅರ್ಥೈಸಿಕೊಳ್ಳದಿರುವುದಕ್ಕೆ
–
ಕ್ಷಮಿಸಿಬಿಡು ಅಣ್ಣ
ನೀನು ತೋರಿದ ಸರಳ
ದಾರಿಯನ್ನೀಗ ಯಾರು ಯಾರೋ
ಗುತ್ತಿಗೆ ಹಿಡಿದಿದ್ದಾರೆ
ಸುಲಭವಾದ ನಡೆಗೆ
ಅಡೆತಡೆಗಳನ್ನೊಡ್ಡಿದ್ದಾರೆ
ಮಾನವೀಯ ಮಿಡಿತವೇ
ತುಂಬಿರುವ ವಚನಗಳಿಗೆ
ನೂರೆಂಟು ಅರ್ಥಗಳ ಕಲ್ಪಿಸಿದ್ದಾರೆ
–
ಸಾಧ್ಯವಾದರೆ ಕ್ಷಮಿಸಿಬಿಡು
ಅಣ್ಣ ಬಸವಣ್ಣ
ನೀನೆಂದರೆ ಏನೆಂದೇ
ಅರಿತುಕೊಳ್ಳದೇ ನಿನ್ನ
ಮೆರವಣಿಗೆ ಮಾಡುತಿರುವುದಕ್ಕೆ
ಚಿನ್ನದ ಖರೀದಿಯ
ದಿನವಾಗಿಸಿದುದಕ್ಕೆ
-ಸಿದ್ಧರಾಮ ಕೂಡ್ಲಿಗಿ
*****