ಅಮ್ಮನಿಗೆ ವಯಸ್ಸಾಗಲಿಲ್ಲ
ಸಾದಾ ಸೀರೆ ಕೂದಲಗಂಟು ನಿರಾಡಂಬರ ಸುಂದರಿ ಅಮ್ಮ. ಸಾದಾ ಊಟ ನೀರಿನ ಲೋಟ ಇಷ್ಟಕ್ಕೆ ತೃಪ್ತಳು ನನ್ನಮ್ಮ
ಅಡುಗೆಮನೆ ಕಾರ್ಯಕ್ಷೇತ್ರ
ಮನೆಯ ಮೂಲೆ ಪುಣ್ಯಕ್ಷೇತ್ರ
ಅಮ್ಮ ಎಂದೆಂದಿಗೂ ಪರಿಪೂರ್ಣ
ಅಮ್ಮ ಇರುವುದೇ ಹಾಗೇ…
ವಯಸ್ಸಾಯಿತಲ್ಲ
ನಮ್ಮಲಿಷ್ಟು ಸಮಾಧಾನ…. !?
ಮಗ ಕೊಂಡು ತಂದ ಮಸುಕು ಬಣ್ಣದ ಸೀರೆ..!
ಇದೆಲ್ಲ… ನನಗ್ಯಾಕೆ ಅಮ್ಮನ ಉದ್ಗಾರ
ಸೊಸೆಗೆ ಮಗ ಕೊಟ್ಟ ಬಣ್ಣದ ಸೀರೆ
ಅಮ್ಮನ ಕಣ್ಣಲ್ಲಿ ಕನಸಿನ ಚಿತ್ತಾರ
ಒಂದು ಕ್ಷಣ ಒರಟು ಕೈಯಲ್ಲಿ
ಸೊಸೆಯ ಮೃದು ಸೀರೆಯ ಸ್ಪರ್ಷ
ತನಗೂ ಇದು ಹೊಂದುವುದು
ಮನದಲ್ಲಿ ಅವಿತಿದ್ದ ಆಸೆಗಳ ತಾಕಲಾಟ
ಚಿವುಟಿದೆ ಹಸಿರು ಕನಸುಗಳನ್ನು
ಒಣ ಬಣ್ಣದ ಈ ಮಸುಕು ಸೀರೆ
ಅವಿತು ಕೂತ ನಿತ್ಯ ಹಸಿರು ಕನಸುಗಳ
ಹುಡುಕಿ ಹುಡುಕಿ ಕಳೆಗುಂದಿಸುತ್ತಿದೆ
ಹೇಗಿದೆಯಮ್ಮಾ… ಸೀರೆ..
ನಿನಗೆ ಇಷ್ಟವಾಯಿತಾ… !!
ಮಗನ ಹೆಮ್ಮೆಯ ಮಾತಿಗೆ
ಅಮ್ಮನ ಜಿಗುಪ್ಸೆಯ ಉತ್ತರ
ಕಾಡು ಬಾ ಅನ್ನುತಿದೆ…
ನನಗ್ಯಾಕೆ ಇದು…..!?
ಒಣಗಿ ಬತ್ತಿದ ಕಣ್ಣುಗಳಲ್ಲೂ
ತೆಳು ನೀರಿನ ಪರದೆ…!?
ಅಮ್ಮನಿಗೆ ವಯಸ್ಸಾಗಲಿಲ್ಲ
ಅವಳೊಳಗಿರುವ ಹೆಣ್ಣು ಚಿರಯೌವನೆ
ಶೃಂಗಾರ ಪ್ರಿಯೆ… !!
ತನ್ನವರ ಒಳಿತಿಗಾಗಿ
ತನ್ನ ಆಸೆಗಳ ಬಚ್ಚಿಟ್ಟು
ಮತ್ತೆ ಬರಲಿರುವುದು ಸಂಭ್ರಮದ ದಿನಗಳು
ಎಂಬ ನಿರೀಕ್ಷೆಯೊಂದಿಗೆ
ಅವಳೊಳಗಿನ ಹೆಣ್ಣು ಕಾಯುತ್ತಿದ್ದಾಳೆ….
ಅಮ್ಮ ಮಾತ್ರ ವಿರಾಗಿಣಿಯ ವೇಷ ಧರಿಸಿದ್ದಾಳೆ
ಅಮ್ಮನಿಗೆ ವಯಸ್ಸಾಗಲಿಲ್ಲ..!!
-ಅನಿತಾ ಸಿಕ್ವೇರಾ, ಉಡುಪಿ
*****