ಚೆಲುವಿನ ಕನ್ನಿಕೆ
ಸುಂದರ ನಾರಿಯು ನಾಚುತ ನಿಂತಳು
ಬೆಡಗಿನ ಹುಡುಗಿಯು ಯಾರಿವಳು?
ಚೆಂದದ ನಗೆಯಲಿ ಮುಖವನು ಮುಚ್ಚುತ
ಹೂವಿನ ಬುಟ್ಟಿಯ ಹಿಡಿದಿಹಳು||
ನಲ್ಲನ ಮಾತನು ಮನದಲಿ ನೆನೆಯುತ
ಕನಸಿನ ಲೋಕಕೆ ತೆರಳಿಹಳು|
ತಲ್ಲಣ ತೊರೆಯುತ ಭಾವನೆಯರಳಿಸಿ
ಮೋಹಕ ನಗೆಯನು ಬೀರಿಹಳು||
ಬದುಕಿನ ಒಳಿತಿಗೆ ವರವನು ಕೇಳಲು
ದೇವರ ಗುಡಿಯೊಳು ಹೊರಟಿಹಳು|
ಮದುವೆಯ ಬಂಧವು ಬೇಗನೆ ಬೆಸೆಯಲಿ
ಎನ್ನುವ ಕಲ್ಪನೆ ಮಾಡಿಹಳು||
ಚೆಲುವಿನ ಕನ್ನಿಕೆ ಸೀರೆಯ ಉಡುಪಲಿ
ಭಾರತ ಸಂಸ್ಕೃತಿ ಮೆರೆದಿಹಳು|
ಒಲವಿನ ಇನಿಯನ ನೆನೆಪಲಿ ತೇಲುತ
ಹರುಷದ ಸಮಯವ ಸವಿದಿಹಳು||
ತಲೆಯಲಿ ಮುಡಿದಿಹ ಮಲ್ಲಿಗೆ ದಂಡೆಯು
ಹೆಚ್ಚಿನ ಕಳೆಯನು ನೀಡುತಿದೆ|
ಲಲನೆಯ ತೋಷವು ಇಮ್ಮಡಿಯಾದುದು
ಮೇಲಿನ ನೋಟಕೆ ಕಾಣುತಿದೆ||
(ಚತುರ್ಮಾತ್ರಾ ಗಣ ಲಯದಲ್ಲಿ)
-ಅಶ್ವತ್ಥನಾರಾಯಣ
ಮೈಸೂರು
*****