ಅನುದಿನ‌ ಕವನ-೪೯೮, ಕವಿ ಪ್ರಕಾಶ್ ಮಲ್ಕಿಒಡೆಯರ್ ಅವರ ಐದು ಹನಿಗವಿತೆಗಳು

ಪ್ರಕಾಶ್ ಮಲ್ಕಿಒಡೆಯರ್ ಅವರ ಐದು ಹನಿಗವನಗಳು

೧. ಹಗರಣ👇
ಸೂರ್ಯ ಚಂದ್ರ ಭೂಮಿ
ಒಂದೇ ರೇಖೆಯಲ್ಲಿ ಬಂದಾಗ
ಗ್ರಹಣಗಳಾಗುತ್ತವೆ ;
ಕಳ್ಳ – ಪೋಲಿಸ್ ರಾಜಕಾರಣಿ
ಒಂದೇ ದಾರಿಯಲ್ಲಿ ಬಂದಾಗ
ಹಗರಣಗಳಾಗುತ್ತವೆ !

೨. ಅಮವಾಸ್ಯೆ👇
ಒಬ್ಬ ನೀರೆ
ತಾರೆ
ಹಲ್ಕಿರಿದರೆ
ನಾವು ಕರಗಿ ಬಿಡುತ್ತೇವೆ ;
ಇಪ್ಪತ್ತೇಳು ತಾರೆಯರ
ನಡುವಿನ ಚಂದಿರ
ಕರಗದಿರಲು ಸಾಧ್ಯವೇ ?

೩. ಬದುಕು 👇
ಏನೆಲ್ಲಾ ಅಂದರೂ
ಗಂಡೊಂದು ಶಿಲೆ,
ಹೆಣ್ಣು ರೂವಾರಿಯಾಗಬೇಕು ;
ಆ ಶಿಲೆಯಲ್ಲಿ
ಕಲೆಯ ಕೆತ್ತಬೇಕು
ಆಗಲೇ ಬದುಕು !

೪. ಚಕ್ರ 👇
ಚೈತ್ರ ವೈಶಾಖ
ಅದು ಋತು ಚಕ್ರ ;
ದಾಂಪತ್ಯ ಸುಖ
ಅದು ಬಾಳ ಚಕ್ರ !

೫. ಸೂರ್ಯ 👇
ಸದಾ ಕೆಂಡ ಕಾರುತ್ತಾನೆ
ಸೂರಜ ;
ಯಾಕೆಂದರೆ ಅವನಿಗೆ
ಎಂದೂ ಸಿಗುತ್ತಿಲ್ಲ ರಜ !


-ಪ್ರಕಾಶ್ ಮಲ್ಕಿಒಡೆಯರ್
ಹೂವಿನ ಹಡಗಲಿ
*****