ಬಳ್ಳಾರಿ, ಮೇ 13: ಕಾವ್ಯ ಅನ್ನೋದು ಕಟ್ಟುವಿಕೆ ಆಗಬಾರದು, ಹುಟ್ಟುವಿಕೆ ಆಗಬೇಕು
ಎಂದು ಹಿರಿಯ ಸಾಹಿತಿ ಟಿ.ಕೆ. ಗಂಗಾಧರ ಪತ್ತಾರ ಅವರು ಹೇಳಿದರು.
ಸ್ಥಳೀಯ ಸಂಸ್ಕೃತಿ ಪ್ರಕಾಶನ,
ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಮತ್ತು
ಕರ್ನಾಟಕ ಕಹಳೆ ಡಾಟ್ ಕಾಮ್ ಇವರ ಸಹಯೋಗದಲ್ಲಿ
ಜನಸೇವಕ, ಗಾಂಧಿವಾದಿ ಹಂಪಾಪಟ್ಟಣದ ಶ್ರೀ ಸಿ.ಈಶಪ್ಪ ಅವರ 35ನೇ ಪುಣ್ಯ ಸ್ಮರಣೆ ಅಂಗವಾಗಿ ನಗರದ ಪೊಲೀಸ್ ಜಿಮ್ ಖಾನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ
ಕವಯತ್ರಿ ಹುನಗುಂದದ ಡಾ. ನಾಗರತ್ನಾ ಅಶೋಕ ಭಾವಿಕಟ್ಟಿ ಅವರ ‘ನನ್ನೊಡೆಯ ಬುದ್ಧ ಪ್ರಿಯಾ’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕಲ್ಪನೆಯ ದಂತಗೋಪುರದಲ್ಲಿ ಕುಳಿತು ಅಕ್ಷರಗಳ ನೂಲಿನಿಂದ ಹೆಣೆಯೋದು ಕಾವ್ಯ ಆಗುವುದಿಲ್ಲ. ಬದುಕಿನ ಬೇಗುದಿಯಲ್ಲಿ ಬೆಂದು ಬಳಲಿದಾಗ ಮನದ ಭಾವನೆ, ಕಂಡುಂಡ ಬೇವು-ಬೆಲ್ಲದ ಸಿಹಿ-ಕಹಿ ಸಮರಸದ ಹಳವಂಡಗಳು ಸತ್ ಚಿಂತನೆಯ ಮೂಸೆಯಲ್ಲಿ ಪುಟಕ್ಕಿಟ್ಟ ಚಿನ್ನವಾಗಿ ಹೊಳೆದಾಗ ಕವಿತೆ ಹುಟ್ಟುತ್ತದೆ ಎಂದು ಅಭಿಪ್ರಾಯ ಪಟ್ಟರು.
ನೂತನ ಅಪ್ಪ ಪ್ರಕಾಶನದ ಲಾಂಛನ ಬಿಡುಗಡೆಗೊಳಿಸಿದ ಧಾರವಾಡದ ಕವಿವಿ ನಿವೃತ್ತ ಪ್ರಾಧ್ಯಾಪಕ, ಸಂಶೋಧಕ ಡಾ. ಜೆ ಎಂ ನಾಗಯ್ಯ ಅವರು ಮಾತನಾಡಿ, ಓದುಗರ ಕೊರತೆಯ ಈ ಸಂದರ್ಭದಲ್ಲಿ ಪ್ರಕಾಶನ ಸಂಸ್ಥೆ ನಡೆಸುವುದು ಸ್ವಲ್ಪ ಸವಾಲಿನ ಕೆಲಸ. ಮೌಲ್ಯಯುತ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡುವ ಮೂಲಕ ಅಪ್ಪ ಪ್ರಕಾಶನ ಜನಪ್ರಿಯಗೊಳ್ಳಲಿ ಎಂದು ಆಶಿಸಿದರು.
ಪ್ರಸ್ತುತ ಧರ್ಮಗಳ ಹೆಸರಿನಲ್ಲಿ ದೇಶದಲ್ಲಿನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿಷಾಧಿಸಿದ ಅವರು,
ಸಾರ್ವಜನಿಕರಿಗೆ ಉಪಯೋಗವಾಗುವ ಕಾರ್ಯಗಳನ್ನು ಮಾಡುವುದೇ ನಿಜ ಧರ್ಮದ ಕಾರ್ಯ ಎಂದು ಹೇಳಿದರು.
ಹಿಂದಿನ ರಾಜಕಾರಣಿಗಳ ದಕ್ಷ ಆಡಳಿತ, ಪ್ರಾಮಾಣಿಕತೆ ಇಂದಿನವರಿಗೆ ಆದರ್ಶವಾಗಬೇಕು. ಹಂಪಾಪಟ್ಟಣದ ಸಿ. ಈಶಪ್ಪ ಅವರು ಜನಮುಖಿ ರಾಜಕಾರಣಿಯಾಗಿದ್ದು ನಿಜ ಜನಸೇವಕರಾಗಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ ಅವರು ಮಾತನಾಡಿ ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ತನ್ನ ಸಮಾಜ ಮುಖಿ ಕಾರ್ಯಗಳ ಮೂಲಕ ತನ್ನದೇ ಆದ ರೀತಿಯಲ್ಲಿ ವಿಶಿಷ್ಟ ಛಾಪು ಮೂಡಿಸಿದೆ. ವೇದಿಕೆಯ ಸಂಸ್ಥಾಪಕ ಅಧ್ಯಕ್ಷ, ಹಿರಿಯ ಪತ್ರಕರ್ತ ಸಿ.ಮಂಜುನಾಥ ಅವರು ಉತ್ತಮ ಸಂಘಟಕರು. ಕಳೆದ ಎರಡು ದಶಕಗಳಿಂದ ಜಿಲ್ಲೆಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿದರೂ ಜನಮನ ಸೆಳೆಯುವಂತೆ ಇರುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ತಹಸೀಲ್ದಾರ ಹೆಚ್.ನೀಲಪ್ಪ ಅವರು, 1965ರಲ್ಲಿ ಟಿಡಿಬಿ ಸದಸ್ಯರಾಗಿದ್ದ ದಿ.ಸಿ. ಈಶಪ್ಪ ಅವರು ನನಗೆ ಹಡಗಲಿ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ ಕೊಡಿಸದೇ ಹೋಗಿದ್ದರೆ ನಾನು ದನ ಕಾಯಬೇಕಾಗಿತ್ತು ಎಂದು ಭಾವುಕರಾದರು.
ಸಿ. ಈಶಪ್ಪ ಅವರು ಮಾಸಿಕ ಮತ್ತಿತರ ಸಭೆಗಳಿಗೆ ಹಡಗಲಿಗೆ ಬಂದಾಗಲೆಲ್ಲಾ ಹಾಸ್ಟೆಲ್ ಗೆ ಭೇಟಿ ನೀಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪ್ರಗತಿ ಬಗ್ಗೆ ವಿಚಾರಿಸುತ್ತಿದ್ದರು ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಬಿ. ಸುಜಾತಮ್ಮ, ಕವಯತ್ರಿ ನಾಗರತ್ನಾ ಭಾವಿಕಟ್ಟಿ, ಕಲಾ ನಿರ್ದೇಶಕ ಮಂಜುನಾಥ್ ಗೋವಿಂದವಾಡ, ಮರಿಯಮ್ಮನಹಳ್ಳಿಯ ಸಚ್ಚಿದಾನಂದ ಶೆಟ್ಟಿ, ಯು ಕೆ ಕೊಟ್ರೇಶ್ ಮತ್ತಿತರು ಮಾತನಾಡಿದರು.
ಕವಿ ಕಾವ್ಯ ಗಾಯನ: ಹಿರಿಯ ಕವಿ ಕಾರವಾರ ಕೈಗಾದ. ಎ ಎನ್ ರಮೇಶ್ ಗುಬ್ಬಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿ ಕಾವ್ಯ ಗಾಯನ ನೆರೆದಿದ್ದ ಕಾವ್ಯ ಪ್ರಿಯರ ಮನ ಸೆಳೆಯಿತು.
ಸಾಹಿತಿ ದಂಪತಿ ಪ್ರಕಾಶ ಮಲ್ಕಿಒಡೆಯರ್, ಶೋಭ ಮಲ್ಕಿಒಡೆಯರ್, ದಾವಣಗೆರೆ ಧರಣೀಪ್ರಿಯೆ, ನಾಗರತ್ನಾ ಅಶೋಕ ಭಾವಿಕಟ್ಟಿ, ಮನಂ, ಡಾ. ನೆಲ್ಲಿಕಟ್ಟೆ ಸಿದ್ದೇಶ, ಡಾ. ನಿಂಗಮ್ಮ ಭಾವಿಕಟ್ಟಿ ಅವರ ಪದ್ಯಗಳಿಗೆ ರಾಗ ಸಂಯೋಜಿಸಿ ಹಬೊ ಹಳ್ಳಿಯ ಸಂಗೀತ ಶಿಕ್ಷಕಿ ಶಾರದ ಮಂಜುನಾಥ್ ಅವರು ಆಕರ್ಷಕವಾಗಿ ಹಾಡಿದರು. ಮೊರಿಗೇರಿಯ ಸಿ.ಕೊಟ್ರೇಶ್ ತಬಲ ಸಾಥ್ ನೀಡಿದರು.
ಅಪ್ಪ ಪ್ರಶಸ್ತಿ: ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಡಾ. ಜೆ ಎಂ ನಾಗಯ್ಯ, ಟಿ.ಕೆ ಗಂಗಾಧರ ಪತ್ತಾರ್, ಸಮಾಜ ಸೇವಕ ಸಚ್ಚದಾನಂದ ಶೆಟ್ಟಿ, ಕೆ. ಶಾರದ ಮಂಜುನಾಥ್ ಅವರಿಗೆ ಅಪ್ಪ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಾಹಿತಿ ಮೇಟಿ ಕೊಟ್ರಪ್ಪ, ಜಿಪಂ ಮಾಜಿ ಸದಸ್ಯರಾದ ಹೆಚ್. ಭೀಮಣ್ಣ, ಹೆಗ್ಡಾಳ್ ರಾಮಣ್ಣ, ಭೂನ್ಯಾಯ ಮಂಡಳಿ ಮಾಜಿ ಸದಸ್ಯ ಗೆದ್ದಲಗಟ್ಟಿ ತಿಮ್ಮಣ್ಣ, ಸಿಎಂಎಸ್ ಮುಖಂಡರಾದ ಕಹಳೆ ಬಸವರಾಜ್, ಕೆಇಬಿ ಸಿ. ಶಿವಮೂರ್ತಿ, ಸಿ. ಶಿವನಾಗಪ್ಪ, ಸಿ. ರೇವಣಸಿದ್ದಪ್ಪ ಮಾಲವಿ, ಎಲಿಗೇರ್ ಕುಬೇರಪ್ಪ ಮತ್ತಿತರ ಮುಖಂಡರು ಉಪಸ್ಥಿತರಿದ್ದರು. ಒಡನಾಡಿ, ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಪ್ಪ ಪ್ರಕಾಶನದ ಸಿ.ಶಿವಾನಂದ ಸ್ವಾಗತಿಸಿದರು. ವೇದಿಕೆಯ ಅಧ್ಯಕ್ಷ ಸಿ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳ್ಳಾರಿ ಆಕಾಶವಾಣಿ ಉದ್ಘೋಷಕ ಬಸವರಾಜ ಅಮಾತಿ ನಿರೂಪಿಸಿದರು. ಸಂಶೋಧಕ ಡಾ. ಅಶ್ವರಾಮು ವಂದಿಸಿದರು.
*****