“ಇದು ಹೆಂಡತಿಯ ಹುಟ್ಟುಹಬ್ಬದ ಮೇಲಿನ ಕವಿತೆ. ಪತಿಯ ಪ್ರೀತಿ ಹಾರೈಕೆಗಳ ಭಾವಗೀತೆ. ಅಪ್ಪ-ಅಮ್ಮನ ಮನೆಯಲ್ಲಿ ಕಣ್ಮಣಿಯಾಗಿ ಬೆಳೆದ ಹೆಣ್ಣು, ಅಪರಿಚಿತನ ಮಡದಿಯಾಗಿ ಮನೆ-ಮನಗಳ ಬೆಳಗುವ ಜ್ಯೋತಿಯಾಗಿ ಬೆಳಕ ತುಂಬುವಳು. ಗಂಡ-ಮಕ್ಕಳ ಹುಟ್ಟಿದ ದಿನವನ್ನು ಹಬ್ಬವಾಗಿಸುವ ಅವಳ ಜನ್ಮದಿನ ಎಲ್ಲ ಹಬ್ಬಗಳಿಗಿಂತ ಮನೆಯ ಮಹಾ ಹಬ್ಬ. ಏನಂತೀರಾ..?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ👇
ಶುಭಾಶಯ ಶ್ರೀಮತಿ..!
ನಿತ್ಯವೂ ನನ್ನನು ಮಡಿಲ ಮಗುವಂತೆ
ಕಂಗಳಲಿ ಕಾಪಿಡುತ ಪೆÇರೆಯುವವಳು
ಮಗುವಾಗಿ ಬುವಿಗೆ ಬಂದ ದಿನವಿಂದು.!
ಮಮತೆಯ ಕಣ್ಣಾಗಿ ಅನುಕ್ಷಣವೂ ನನ್ನ
ಆದರಿಸಿ ಅಡಿಗಡಿಗೂ ಕಾಯುವವಳು
ಕಂದನಾಗಿ ಕಣ್ಣುಗಳ ತೆರೆದ ದಿನವಿಂದು.!
ಸತಿಯೆಂದರೆ ಎರಡನೇ ತಾಯಿಯೆಂಬ
ಸಾಲುಗಳಿಗೆ ಅಕ್ಷರಶಃ ನಿದರ್ಶನಳಾದವಳು
ತಾಯೊಡಲಿಂದ ಧರೆಗಿಳಿದ ದಿನವಿಂದು.!
ನನ್ನ ಹುಟ್ಟಿದ ದಿನವ ಹಬ್ಬವಾಗಿಸಿದವಳು
ಸಡಗರ ಸಂಭ್ರಮಗಳ ಸಾಕಾರವಾಗಿಸಿದಳು
ಹುಟ್ಟಿದ ಸಿಹಿ ಸಂತಸದ ಸುದಿನವಿಂದು.!
ಸಪ್ತಪದಿ ತುಳಿದು ಸಂಗಾತಿಯಾದವಳು
ಸಂಸಾರರಥಕೆ ಸಾರಥ್ಯದ ಉಸಿರಾದವಳು
ಉಸಿರು ತಳೆದು ಉಲಿದ ಸವಿದಿನವಿಂದು.!
ಜನ್ಮ ಜನ್ಮಗಳ ಬಂಧವಿದೆಂದು ನಿರೂಪಿಸಿ
ಜೀವದಾ ಜೋಡಿಯಾಗಿ ಜೊತೆಯಾದವಳು
ಜನಿಸಿದಾ ಹರ್ಷದ ವರ್ಷದ ಜನ್ಮದಿನವಿಂದು.!
ಜನ್ಮದಿನ ಶುಭಾಶಯಗಳು ನಿನಗೆ ಶ್ರೀಮತಿ
ನಿನಗಿರಲಿ ಸದಾ ಆಯುರಾರೋಗ್ಯ ಸಂಪ್ರೀತಿ
ನಗುತ ನೂರುವರ್ಷ ಸುಖದಿಂದಿರು ಎಂದು.!
ಅನುದಿನ ಸಲಹುತಿರಲಿ ಕೇಶವನೊಲುಮೆ
ಪ್ರತಿದಿನ ಪುಟಿಯುತಿರಲಿ ಚೈತನ್ಯ ಚಿಲುಮೆ
ಹೆಜ್ಜೆ ಹೆಜ್ಜೆಗೂ ಹರುಷವಿರಲಿ ನಿನಗೆಂದು
ನಲಿವು ಗೆಲುವು ನಿರಂತರವಿರಲಿ ಎಂದೆಂದು.!
-ಎ.ಎನ್.ರಮೇಶ್ ಗುಬ್ಬಿ, ಕೈಗಾ, (ಉತ್ತರ ಕನ್ನಡ ಜಿಲ್ಲೆ)
*****