ಅನುದಿನ‌ ಕವನ:೫೦೦, ಹಿರಿಯ ಕವಿ: ಶೂದ್ರ ಶ್ರೀನಿವಾಸ್, ಬೆಂಗಳೂರು, ಕವನದ ಶೀರ್ಷಿಕೆ: ಸಿದ್ಧಲಿಂಗಯ್ಯ

ಕರ್ನಾಟಕ ಕಹಳೆ ಡಾಟ್ ಕಾಮ್’ ನ ಜನಪ್ರಿಯ ‘ಅನುದಿನ ಕವನ’ ಕಾಲಂ ಆರಂಭವಾಗಿ ಇಂದಿಗೆ 500 ದಿನಗಳಾದವು ಎಂದು ತಿಳಿಸಲು ಹರ್ಷವಾಗುತ್ತಿದೆ.
ಈ ಐದನೂರು ದಿನಗಳಲ್ಲಿ ನಾಡಿನ ಹಿರಿಯ, ಕಿರಿಯ, ಪ್ರಸಿದ್ಧ, ಉದಯೋನ್ಮುಖ ಕವಿ-ಕವಯತ್ರಿಯರ ಕವಿತೆ, ಹನಿಗವಿತೆಗಳನ್ನು ನಿರಂತರವಾಗಿ ಪ್ರಕಟಿಸಿದ ಖುಷಿ ಕರ್ನಾಟಕ ಕಹಳೆ ಡಾಟ್ ಕಾಮ್ ದಾಗಿದೆ.
ಇಂದಿನ ವಿಶೇಷ 500ನೇ “ಅನುದಿನ ಕವನ”ದ ಗೌರವಕ್ಕೆ
ನಾಡಿನ ಹಿರಿಯ ‌ಕವಿ ಶ್ರೀ ಶೂದ್ರ ಶ್ರೀನಿವಾಸ್ ಅವರ ‘ಸಿದ್ಧಲಿಂಗಯ್ಯ’ ಕವಿತೆ ಪಾತ್ರವಾಗಿದೆ.

(ಸಂಪಾದಕರು:ಕರ್ನಾಟಕ ಕಹಳೆ.ಕಾಮ್)👇
*****

ಸಿದ್ದಲಿಂಗಯ್ಯ ಕವಿತೆ ಬರೆದ ಕುರಿತು, ಪದ್ಮಶ್ರೀ ದಿ.‌ಡಾ.‌ಸಿದ್ಧಲಿಂಗಯ್ಯ ಅವರ ಬಹುದಿನಗಳ ಒಡನಾಡಿ, ಹಿರಿಯ ಕವಿ ಶ್ರೀ ಶೂದ್ರ ಶ್ರೀನಿವಾಸ ಅವರ ಕಿರು ಟಿಪ್ಪಣಿ👇

ಈ ಕರೋನ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಒಂದೇ ಒಂದು ಕವಿತೆ ಬರೆಯಲಾಗಲಿಲ್ಲ.ಗೆಳೆಯ ಸಿದ್ದಲಿಂಗಯ್ಯ ಕರೋನಗೆ
ತುತ್ತಾದ ಮೇಲೆ ಕವಿ ಮಿತ್ರರಾದ ಶಿವರಾಜ ಬ್ಯಾಡರಹಳ್ಳಿ ಮತ್ತು ಮುದಲ್ ವಿಜಯ್ ಅವರು ಕವಿಗಳ ಕುರಿತು ಒಂದು ಕವನ ಸಂಕಲನ ತರಲು ಸಿದ್ಧತೆ ನಡೆಸಿದ್ದಾರೆ. ಅದಕ್ಕಾಗಿ ಒತ್ತಾಯ ಮಾಡಿ ಬರೆಸಿದ್ದಾರೆ. ಅವರಿಗೆ ಋಣಿಯಾಗಿರುವೆ.

– ಶೂದ್ರ ಶ್ರೀನಿವಾಸ್
*****

ಸಿದ್ದಲಿಂಗಯ್ಯ

‘ ನನ್ನ ಜನ ‘ ರ ದನಿಯ ಮುಂದೆ ಬದುಕ
ಹುಡುಕಾಟದಲ್ಲಿ ಏನೇನೋ ಕಾಣುತ್ತ
ಮೇಲಕ್ಕೇರುತ್ತ ಬದುಕಿನ ಹಾದಿಯಲ್ಲಿ
ಇವೆಲ್ಲಾ ಇದೆಯಾ ಎಂದು ಅಂತರಂಗದಲ್ಲಿ
ಮೆಟ್ಟಲಿಗೆ ಕಾರಣವಾದ ಕಾವ್ಯದ ನುಡಿಗಳ
ವಿಷಾದತೆಗೆ ಅವರ ಮನೋಲೋಕವೂ
ಭಾಗಿಯಾದಂತೆಲ್ಲ ಧ್ಯಾನದತ್ತ ವಾಲಿದರು
ಅದು ಗಾಢವಾದಂತೆಲ್ಲ ಪ್ರಶ್ನೆಗಳ ಮೊತ್ತ.

ಧ್ಯಾನದಿಂದ ದತ್ತವಾದ ಅರಿವೇ ಅವರು
ಮೇಲ ಮೇಲಕ್ಕೆ ಹೋಗಲು ಕಾರಣವಾದ
ಒಂದೊಂದು ನುಡಿಯೂ ಪ್ರಶ್ನೆಗಳಾಗಿ ಕಾಡಿ
ಮೃದುಗೊಂಡು ಕೊನೆಗೂ ಅಂತರಂಗಕ್ಕೆ
ಬಹಿರಂಗಕ್ಕೆ ಯಾವ ತೆರನಾದ ನಂಟು ಎಂಬ
ಜಿಜ್ಞಾಸೆಯಲಿ ” ಇನ್ನು ಮುಂದೆ ನನ್ನ ನುಡಿ
ಕೂಗಾಟಕ್ಕಲ್ಲ ; ಹುಡುಕಾಟಕ್ಕೆ ” ಎಂಬ
ಆಂತರಿಕ ಮಾರ್ಮಿಕತೆ ಧ್ವನಿಯಾಯಿತು.

ಮಾತಿನ ವ್ಯಂಗ್ಯ, ತರ್ಕಬದ್ಧತೆಯ ತಾತ್ಪರ್ಯ
ಅವರನ್ನು ಬಾಧಿಸತೊಡಗಿ ಬೆಳೆದು ಬಂದ
ಒಂದೊಂದೇ ಹೆಜ್ಜೆ ಗುರುತು ಮರುಗಿದಂತೆ
ಗೋಚರಿಸಿದಂತೆಲ್ಲ ಕೊನೆಗೆ ತಮ್ಮ ಅಂತಿಮ
ನಡೆ ಯಾವ ಕಡೆಗೆ ಎಂಬ ತಾರ್ಕಿಕತೆಯು
ಅವರ ಧ್ವನಿಯಾಗಿ ದಾಖಲಾದ ಸಾಲುಗಳು
ಕಾಡತೊಡಗಿ ಇವುಗಳನ್ನೆಲ್ಲಾ ವ್ಯಾಖ್ಯಾನಿಸು
ಎನ್ನುವ ಅಂತರ್ಮುಖತೆಯ ಆರ್ತ ನುಡಿ.

ತಮಗೆ ದಕ್ಕಿದ ಒಂದೊಂದೇ ಆಸನವೂ
ಸಂದೇಹಗಳನ್ನು ಮುಂದಿಡುತ್ತಾ ಹೋದಾಗ
ಮುಂದೆ ಪ್ರಶ್ನೆ ಕೇಳುವ ನೂರಾರು ‘ನನ್ನ ಜನ’
ನಕ್ಕು ನಾನೇ ಪ್ರಶ್ನೆಗಳ ಮೂಟೆ ಹೊತ್ತಿದ್ದೇನೆ
ಆದರೆ ದೇಹ ಹೊರಲಾರದಷ್ಟು ಸುಸ್ತಾಗಿದೆ
ಮತ್ತೆ ಯಾವ ರೀತಿಯಲ್ಲಿ ಉತ್ತರಿಸುವುದು
ಎಂದು ತಮ್ಮ ಕಾವ್ಯದ ನುಡಿಗಳಲ್ಲಿ ಸಿಗದ
ಪರಿಹಾರ ಪ್ರಶ್ನೆಯಾಗಿ ಬೆಳೆಯ ತೊಡಗಿತು.

ಜಗತ್ತಿನ ಉದ್ದಗಲಕ್ಕೂ ಕಾಡಿದ ಪೀಡಿಸಿದ ಕರೋನ ಬಲೆ ಬೀಸಿತು ‘ ನನ್ನ ಜನ ‘ ದನಿಯ
ಸೆಳೆದುಕೊಂಡಿತು ;ಇತಿಹಾಸಕ್ಕೆ ಸೇರಿಸಿಬಿಟ್ಟು
ವ್ಯಾಖ್ಯಾನಿಸಿಕೊಳ್ಳಿ ಎಷ್ಟಾದರೂ ಎಂದು.

-ಶೂದ್ರ ಶ್ರೀನಿವಾಸ್, ಬೆಂಗಳೂರು
*****