ಕರ್ನಾಟಕ ಕಹಳೆ ಡಾಟ್ ಕಾಮ್ ನ ಜನಪ್ರಿಯ ಅನುದಿನ ಕವನ ಕಾಲಂನಲ್ಲಿ ನಿರಂತರ 500 ಕವಿತೆಗಳು ಪ್ರಕಟಗೊಂಡು ಒಂದು ದಾಖಲೆಯೇ ನಿರ್ಮಾಣವಾಗಿದೆ. ನಾಡಿನ, ಜಿಲ್ಲೆಯ ಹಿರಿಯ, ಉದಯೋನ್ಮುಖ ಕವಿಗಳು, ಕವಯತ್ರಿಯರ ಸಹಕಾರ, ಬೆಂಬಲವಿರುವದರಿಂದ ಅನುದಿನಕವನ-೫೦೦ ಸಂಭ್ರಮ ಆಚರಿಸಲು ಸಾಧ್ಯವಾಗಿದೆ. ಎಲ್ಲರಿಗೂ ಧನ್ಯವಾದಗಳು. ಇಂದಿನ ಅನುದಿನ ಕವನಗಳ ಗುಚ್ಚಕ್ಕೆ ೫೦೧ನೇ ಕವಿತೆಯಾಗಿ ಶ್ರೀಮತಿ ಶೋಭ ಮಲ್ಕಿಒಡೆಯರ್ ಅವರ ಸಂಭ್ರಮಾಚರಣೆ ಸೇರ್ಪಡೆಯಾಗುತ್ತಿದೆ.
ನಾಳೆ ಅಂದರೆ ೫೦೨ ನೇ ಕವನ ಹಿರಿಯ ಕವಿ ಪ್ರಕಾಶ್ ಮಲ್ಕಿಒಡೆಯರ್ ಅವರ ಪ್ರತಿಬಿಂಬ ಪ್ರಕಟವಾಗಲಿದೆ.
(ಸಂಪಾದಕರು)👇
ಸಂಭ್ರಮಾಚರಣೆ
ಅನುದಿನ ಕವನ
ಐದುನೂರರ ಸಂಭ್ರಮ
ತಿಳಿಸಿದರು ದೂರವಾಣಿಯ ಮೂಲಕ
“ಕರ್ನಾಟಕ ಕಹಳೆ” ಯ ನಾವಿಕ !
” ಅನುದಿನ ಕವನ ಐದುನೂರರ ಸಂಭ್ರಮಕ್ಕೆ ಕಳುಹಿಸಿ ಕವನ ,
ನಿಮ್ಮದೂ ಒಂದು
ಎಲ್ಲರಿಗೂ ತಿಳಿಸಿರುವೆ ನಾನಿಂದು ” !
ಹೌದಾ……
ಹಾಗೆಂದು ನಾನೂ ಬರೆಯಲು ಸಜ್ಜಾದೆ
ಲೇಖನಿ ಹಿಡಿದೆ !
ಕಹಳೆ ಶುರುವಾದಂದಿನಿಂದ
ನನ್ನಲ್ಲೇ ನಾನು
ಆತ್ಮಾವಲೋಕನ ಮಾಡಿಕೊಂಡೆ
ಕಹಳೆಯ ಸದ್ದಿಗೆ ಬೆರಗಾದೆ !
“ಅನುದಿನ ಕವನ ”
ನಿತ್ಯದ ಆಗಮನ
ನೂತನ ವಿಚಾರದ ಅನುಪಮ
ಕವಿ – ಕವಯತ್ರಿಯರನ್ನು
ಕರ್ನಾಟಕದಾದ್ಯಂತ
ಪರಿಚಯಿಸಿದ ಕಹಳೆ
ದಿನ ನಿತ್ಯವೂ
ಹೊಸ – ಹೊಸ ಬಗೆಯ
ಕವನಗಳನ್ನು ಹೊತ್ತು ತರುವ
ಶುಭವೇಳೆ !
ಮತ್ತೆ ಬರೆಯುವೆ
ಸಾವಿರದ ಸಂಭ್ರಮಕ್ಕೆ
ಕಹಳೆಯ ಹೆಜ್ಜೆಯ
ಗೆಜ್ಜೆಯ ನಾದಕ್ಕೆ !
ಇನ್ನೂ – ಇನ್ನೂ
ಬೆಳೆಯಲಿ – ಹೊಳೆಯಲಿ
ಈ ಸಂಭ್ರಮ
ಐದು ನೂರು , ಸಾವಿರ ……
ಸಾಗಲಿ ಹೀಗೆ
ಎಣಿಕೆಗೆ ನಿಲುಕದ ರೀತಿ
ಕರ್ನಾಟಕ ಕಹಳೆಯ ಪ್ರತತಿ.
-ಶೋಭಾ ಮಲ್ಕಿ ಒಡೆಯರ್
ಹೂವಿನ ಹಡಗಲಿ
*****