ಸೌಹಾರ್ದ ಬದುಕಿಗೆ ನಮ್ಮ ಹಳ್ಳಿಗಳೇ ಮಾದರಿ -ಶ್ರೀ ಬಸವಶಾಂತಲಿಂಗ ಸ್ವಾಮೀಜಿ

ಹಾವೇರಿ: ‘ವ್ಯಕ್ತಿ ವ್ಯಕ್ತಿಗಳ ನಡುವೆ ಅಷ್ಟೇ ಅಲ್ಲ, ವಸ್ತುಗಳ ನಡುವೆಯೂ ಸೌಹಾರ್ದ, ಸಾಮರಸ್ಯ ಇದ್ದಾಗಲೇ ಸಮಾಜದಲ್ಲಿ ಸಮತೋಲನ ಸಾಧ್ಯ. ನಮ್ಮ ಹಳ್ಳಿಗಳಲ್ಲಿ ಇಂತಹ ಸೌಹಾರ್ದ ಬದುಕು ಸಹಜವಾಗಿಯೇ ಅಸ್ತಿತ್ವದಲ್ಲಿದೆ” ಎಂದು ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.


ಬೆಂಗಳೂರಿನ ‘ಅಂಕುರ ಪ್ರಕಾಶನ’ ಹೊರತಂದಿರುವ ‘ಸೌಹಾರ್ದ ಕರ್ನಾಟಕ’ ಪುಸ್ತಕವನ್ನು ನಗರದ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, “ಇಂದಿನ ಕಲುಷಿತ ಸಂದರ್ಭದಲ್ಲಿ ಸಾಮರಸ್ಯ ಬದುಕಿನ ಮಹತ್ವವನ್ನು ಭಾವಾವೇಶಕ್ಕೆ ತುತ್ತಾಗಿರುವ ನಗರ ಪ್ರದೇಶಗಳ ಯುವ ಜನತೆಗೆ ಮುಟ್ಟಿಸುವ ಅಗತ್ಯವಿದೆ” ಎಂದು ಹೇಳಿದರು.
ಎಲ್ಲಾ ಸಮುದಾಯಗಳನ್ನು ಮುನ್ನಡೆಸಿಕೊಂಡು ಹೋಗುವ ಔದಾರ್ಯದ ಸಾಮಾಜಿಕ ನಾಯಕತ್ವದ ಅವಶ್ಯಕತೆ ಬಗ್ಗೆ ಸ್ವಾಮೀಜಿ ಗಮನ ಸೆಳೆದರು.


ಕೃತಿಯ ಸಂಪಾದಕ, ಹಿರಿಯ ಲೇಖಕ, ಪತ್ರಕರ್ತ ಚಂದ್ರಕಾಂತ ವಡ್ಡು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಸೌಹಾರ್ದ ಕರ್ನಾಟಕ” ಸಂಕಲನ ರೂಪುಗೊಳ್ಳಲು ಕಾರಣವಾದ ಸಂದರ್ಭವನ್ನು ವಿವರಿಸಿ, “ಸೌಹಾರ್ದ ಬದುಕಿನ ಮಾದರಿಗಳನ್ನು ಹೊಸದಾಗಿ ರೂಪಿಸುವ ಅಗತ್ಯವಿಲ್ಲ; ಅವು ಜನರ ದೈನಂದಿನ ಜೀವನದಲ್ಲಿ ತಲೆತಲಾಂತರದಿಂದ ಹಾಸುಹೊಕ್ಕಾಗಿವೆ. ಬೀದರಿನಿಂದ ಮಡಿಕೇರಿ ವರೆಗೆ ನಾಡಿನುದ್ದಕ್ಕೂ ವ್ಯಾಪಿಸಿರುವ ಇಂತಹ ಮಾದರಿಗಳನ್ನು ಈ ಕೃತಿಯಲ್ಲಿ ಸೈದ್ಧಾಂತಿಕ ಭಾರವಿಲ್ಲದೇ ಯಥಾವತ್ತಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದೇನೆ” ಎಂದು ಹೇಳಿದರು.


ಲೇಖಕ ವಿಜಯಕಾಂತ ಪಾಟೀಲ ಅವರು ಮಾತನಾಡಿ, “ನಾವೆಲ್ಲರೂ ಮಕ್ಕಳ ಗುಣವನ್ನು ಅಳವಡಿಸಿಕೊಳ್ಳಬೇಕು. ಆಗ ಜಾತಿ, ಧರ್ಮ ಭೇದ ಇರುವುದಿಲ್ಲ” ಎಂದರು.
ಅತಿಥಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ರಮೇಶ ಜಾಲಿಹಾಳ ಅವರು, “ಅನ್ನಕ್ಕಿಂತ ಸೌಹಾರ್ದವೇ ನಮಗೆ ಮುಖ್ಯ. ಆದರೆ, ಇಂದು ಒಂದು ಮಾತನಾಡಿದರೆ ಹೆಚ್ಚು, ಒಂದು ಮಾತನಾಡಿದರೆ ಕಡಿಮೆ ಎಂಬ ವಾತಾವರಣವಿದೆ. ಗಾಂಧಿ ಅಂಬೇಡ್ಕರ್ ಅನುಯಾಯಿಗಳ ಮೇಲೆ ಇಂತಹ ವಾತಾವರಣವನ್ನು ತಿಳಿಗೊಳಿಸುವ ಜವಾಬ್ದಾರಿಯಿದೆ” ಎಂದರು.
ಮತ್ತೋರ್ವ ಅತಿಥಿ ಕಟ್ಟಡ ಕಾರ್ಮಿಕ ಸಂಘದ ದಾವುಲ್ ಸಾಹೇಬ ಹಿರೇಮುಗುದೂರ ‘ನಾನೊಬ್ಬ ಸಾಮಾನ್ಯ ಗೌಂಡಿ, ಸುಮಾರು ಎರಡೂವರೆ ಸಾವಿರ ಬೇರೆ ಬೇರೆ ಜಾತಿ ಧರ್ಮದ ದುಡಿಯುವ ಜನರಿಗೆ ಕೆಲಸ, ಅನ್ನ ಕೊಡುವಂತೆ ಮಾಡುತ್ತಿರುವೆ. ನಮ್ಮಲ್ಲಿ ಜಾತಿ ಎಂದೂ ಇಣಿಕಿಲ್ಲ. ದುಡಿದು ತಿನ್ನುವವರಿಗೆ ಜಾತಿ ಧರ್ಮದ ಗೊಂದಲವಿಲ್ಲ” ಎಂದರು.
ಸಮಾರಂಭದಲ್ಲಿ ಉಡಚಪ್ಪ ಮಾಳಗಿಮನಿ, ಅಮೀರಜಾನ್ ಬೇಪಾರಿ, ಸುರೇಶ ಚಲವಾದಿ, ನಜೀರಸಾಬ್ ಪಟೇಲ, ಮಹಾಂತೇಶ ಬೇವಿನಹಂಡಿ, ಪರಮೇಶಪ್ಪ ಮೇಗಳಮನಿ, ಸಂಕಮ್ಮ ಸಂಕಣ್ಣನವರ, ಗೂಳಪ್ಪ ಅರಳಿಕಟ್ಟಿ, ಕರಿಯಪ್ಪ ಹಂಚಿನಮನಿ, ಡಾ.ವ್ಹಿ.ಪಿ.ದ್ಯಾಮಣ್ಣನರ, ನಿಂಗಪ್ಪ ಗಾಳೆಮ್ಮನವರ, ವಿರೂಪಾಕ್ಷಪ್ಪ ಹಾವನೂರ, ಮನೋಜ ಪುನೀತ, ಸಿ.ಎಚ್. ಬಾರ್ಕಿ. ಜೆ.ಎಂ. ಮಠದ, ಬಾಪು ನಂದಿಹಳ್ಳಿ, ಮುಂತಾದವರು ಪಾಲ್ಗೊಂಡಿದ್ದರು.
ಸಾಹಿತಿ ಸತೀಶ ಕುಲಕರ್ಣಿ ಪುಸ್ತಕ ಪರಿಚಯಿಸಿದರು. ಪತ್ರಕರ್ತ ಮಾಲತೇಶ ಅಂಗೂರ ಕಾರ್ಯಕ್ರಮ ನಿರೂಪಿಸಿದರು. ಎನ್.ಬಿ.ಕಾಳೆ ವಂದಿಸಿದರು.
*****