ಇದೇ ಮೇ 11ರಂದು ಬಳ್ಳಾರಿಯಲ್ಲಿ, ಸಂಸ್ಕೃತಿ ಪ್ರಕಾಶನ, ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಕಹಳೆ ಡಾಟ್ ಕಾಮ್. ಬಳ್ಳಾರಿ ಇವರ ಸಹಯೋಗದಲ್ಲಿ ಜನಸೇವಕ, ಗಾಂಧೀವಾದಿ ಸಿ.ಈಶಪ್ಪನವರ 35 ನೇ ಪುಣ್ಯ ಸ್ಮರಣೆ ಅಂಗವಾಗಿ ನಡೆದ ‘ಸಾಹಿತ್ಯೋತ್ಸವ’ ದಲ್ಲಿ ಪಾಲ್ಗೊಂಡು, ಅಪೂರ್ವ ಸಮಾರಂಭದ ಅಭೂತಪೂರ್ವ ಯಶಸ್ಸಿನ ಭಾಗವಾಗಿದ್ದು ನನ್ನ ಸುಕೃತ.
“ಒಂದು ಮಾದರಿ ಸಾಹಿತ್ಯೋತ್ಸವ ಹೇಗಿರಬೇಕೆಂಬ ಪ್ರಶ್ನೆಗೆ ಸೂಕ್ತ ಉತ್ತರದಂತಿತ್ತು ಈ ಸಮಾರಂಭ”.. ಸಸಿಗೆ ನೀರೆರೆಯುವುದರ ಮೂಲಕ ವಿಭಿನ್ನ ರೀತಿಯಲ್ಲಿ ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ ಅವರು ಸಾಹಿತ್ಯೋತ್ಸವದ ಉದ್ಘಾಟಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಸಹಕರಿಸಿದರು.
ಕಾರ್ಯಕ್ರಮದ ರೂವಾರಿ ಸಿ. ಮಂಜುನಾಥರಿಂದ ಔಚಿತ್ಯಪೂರ್ಣ ಪ್ರಾಸ್ತಾವಿಕ. ಉದ್ಘಾಟಕರ, ಅತಿಥಿಗಳ ಅರ್ಥಪೂರ್ಣ ವಾಗ್ಲಹರಿ. ನಂತರ ಡಾ.ನಾಗರತ್ನ ಅಶೋಕ ಭಾವಿಕಟ್ಟಿಯವರ ‘ನನ್ನೊಡೆಯ ಬುದ್ಧ ಪ್ರಿಯ” ಕೃತಿಯನ್ನು ಲೋಕಾರ್ಪಣೆಗೊಳಿಸಿದ ಹಿರಿಯ ಸಾಹಿತಿ ಗಂಗಾಧರ ಪತ್ತಾರರಿಂದ ಚೆಂದದ ಕೃತಿ ಪರಿಚಯ. ಕವಯತ್ರಿಯ ಭಾವಪೂರ್ಣ ನುಡಿಗಳು. ಸಿ. ಶಿವಾನಂದ್ ಸಾರಥ್ಯದ ‘ಅಪ್ಪ ಪ್ರಕಾಶನದ’ ಲೋಗೋ ಬಿಡುಗಡೆ ಮಾಡಿದವರು ಸಂಶೋಧಕರೂ ಆಗಿರುವ ಕರ್ನಾಟಕ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಜೆ ಎಂ ನಾಗಯ್ಯ ಅವರು!
ತದನಂತರ ಕವಿಕಾವ್ಯ ವಾಚನ ಗಾಯನ. ಆಹ್ವಾನಿತ ಕವಿಗಳಿಂದ ಕವನ ವಾಚನ. ಜೊತೆಗೆ ಅದೇ ಕವಿತೆಗಳಿಗೆ ರಾಗ ಸಂಯೋಜಿಸಿ, ಮಧುರ ಗಾಯನ ಜನಪ್ರಿಯ ಪ್ರತಿಭಾವಂತ ಗಾಯಕಿ ಶ್ರೀಮತಿ ಕೆ. ಶಾರದ ಮಂಜುನಾಥ ಅವರಿಂದ. ಇವರಿಗೆ ಯುವ ಪ್ರತಿಭೆ ಮೊರಗೇರಿಯ ಸಿ. ಕೊಟ್ರೇಶ್ ಅವರು ತಬಲಸಾಥ್ ನೀಡಿದರು. ನಂತರ ವಿವಿಧ ಕ್ಷೇತ್ರದ ಐವರು ಅಪ್ರತಿಮ ಸಾಧಕರಿಗೆ ಪ್ರತಿಷ್ಠಿತ ಅಪ್ಪ ಪ್ರಶಸ್ತಿ ಪ್ರದಾನ. ಮತ್ತು ದಿ.ಈಶಪ್ಪನವರ ಸಮಾಜಸೇವಾ ಒಡನಾಡಿಗಳು ಮತ್ತು ಸಾಧಕರಿಗೆ ಗೌರವ ಪುರಸ್ಕಾರ. ಬಸವರಾಜ ಅಮಾತಿಯವರ ನಿರೂಪಣೆ ಇಡೀ ಕಾರ್ಯಕ್ರಮಕ್ಕೆ ಕಳಶಪ್ರಾಯವಾಗಿತ್ತು. ಕಡೆಗೆ ರುಚಿಯಾದ ಹೋಳಿಗೆ ಸಹಿತ ಬೂರಿ ಭೋಜನದೊಂದಿಗೆ ಸಮಾರಂಭದ ಮುಕ್ತಾಯ.
ಹೀಗೆ ವೈವಿಧ್ಯಮಯ, ವರ್ಣರಂಜಿತ, ವೈಶಿಷ್ಟ್ಯಪೂರ್ಣ ಕಾರ್ಯಕ್ರಮನ್ನೊಳಗೊಂಡ ಈ ಸಮಾರಂಭ ನಿಜಕ್ಕೂ ಪರಿಪೂರ್ಣ ಸಾಹಿತ್ಯೋತ್ಸವಕ್ಕೆ ಪಕ್ಕಾ ನಿದರ್ಶನ. ಇಂತಹ ಅನನ್ಯ ಸಾಹಿತ್ಯೋತ್ಸವಕ್ಕೆ ಆಮಂತ್ರಿಸಿ, ಕವಿಕಾವ್ಯ ಗಾಯನದ ಅಧ್ಯಕ್ಷ ಪೀಠದ ಗೌರವ ನೀಡಿ ಪುರಸ್ಕರಿಸಿ, ನನ್ನೊಳಗೆ ಧನ್ಯತಾಭಾವ ಮೂಡಿಸಿ ಅವಿಸ್ಮರಣೀಯ ನೆನಪುಗಳ ಕಾಣಿಕೆ ನೀಡಿದ ಸಿ. ಮಂಜುನಾಥ್ ಮತ್ತು ಬಳಗಕ್ಕೆ ನಾನು ಅಭಾರಿ.
ಅಪ್ಪನ ಪುಣ್ಯ ಸ್ಮರಣೆಯಂದು, ಅವರ ಹೆಸರಿನಲ್ಲಿ ಮನೆಯಲ್ಲಿ ಸಿಹಿಯೂಟ ಚಪ್ಪರಿಸಿ ಕಾಟಾಚಾರದ ಆಚರಣೆ ಮಾಡುವವರ ಮಧ್ಯೆ, ಅಪ್ಪನ ಸಮಾಜ ಸೇವೆ, ಹಿರಿಮೆ-ಗರಿಮೆಗಳನ್ನು ಜನಮಾನಸದೆಲ್ಲೆಲ್ಲಾ ಹರಡುವ, ಪ್ರಶಸ್ತಿ ಪ್ರಧಾನದ ಮೂಲಕ ನಾಡಿನ ಮನೆ-ಮನೆಗಳಲ್ಲೂ ಅವರ ಹೆಸರನ್ನು ಪಸರಿಸುವ, ಸಾಹಿತ್ಯಾರಾಧನೆಯ ಮೂಲಕ ಅವರಿಗೊಂದು ನಿಜವಾದ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ಮಂಜುನಾಥ್ ಮತ್ತು ಇವರ ಸಹೋದರರಾದ ಸಿ.ಹಾಲೇಶ್, ಸಿ. ಶಿವಾನಂದ ಹಾಗೂ ಬಂಧು ವರ್ಗ, ಇತರರಿಗೆ ಅಕ್ಷರಶಃ ಆದರ್ಶಪ್ರಾಯರೆನಿಸುತ್ತಾರೆ. ಅನುಕರಣೀಯರೆನಿಸುತ್ತಾರೆ.
ಇಂತಹ ಹೃದಯಸ್ಪರ್ಶಿ ಸಮಾರಂಭದ ಭಾಗಿಯಾಗಿದ್ದು ನನ್ನನ್ನೂ ಸೇರಿದಂತೆ ಪ್ರತಿಯೊಬ್ಬರ ಸೌಭಾಗ್ಯವೇ ಸರಿ. 5-6 ವರ್ಷಗಳಿಂದ ಮುಖಪುಸ್ತಕ, ವಾಟ್ಸಾಪು ಬಳಗಗಳ ಮೂಲಕ ಪರಿಚಯವಾಗಿದ್ದರೂ ಮುಖಾಮುಖಿಯಾಗಿರದ ಹಲವಾರು ಕವಿಮನಸುಗಳನ್ನು, ಸಾಹಿತ್ಯಕ ಸಹೃದಯರನ್ನೂ ಭೇಟಿಯಾಗಿ ಬೆರೆತಿದ್ದು ಹೃನ್ಮನಗಳನ್ನು ಪುಳಕಗೊಳಿಸಿತು.
ಹಿರಿಯ ಸಾಹಿತಿ ಗಂಗಾಧರ ಪತ್ತಾರ್ , ಅಶೋಕ್ ಭಾವಿಕಟ್ಟಿ , ಧರಣೀಪ್ರಿಯೆ (ಗೀತಾ ದಾವಣಗೆರೆ) ತಿಪ್ಪೇಸ್ವಾಮಿ ಅವರು, , ಶೋಭಾ-ಪ್ರಕಾಶ್ ಮಲ್ಕಿ ಒಡೆಯರ್ ದಂಪತಿಗಳು, ಸಿರಿಕಂಠದ ಶಾರದಾ ಮೇಡಂ, ಸಿ. ಶಿವಾನಂದ್, ಶ್ರೀಮತಿ ಮೀನಾಕ್ಷಿ ಮಂಜುನಾಥ್ ಕುಟುಂಬ, ಬಂಧು ವರ್ಗ ಅಬ್ಬಾ ಅದೆಷ್ಟು ಆತ್ಮೀಯ ಸ್ನೇಹವೃಂದ.. ಸಂಜೆಯವರೆಗೂ ಕಾಯ್ದು ತೋರಣಗಲ್ಲಿಗೆ ನನ್ನನ್ನು ಕರೆದೊಯ್ದು ಅಕ್ಕರೆಯಿಂದ ಸತ್ಕರಿಸಿದ ಕವಯತ್ರಿ ಶ್ರೀಮತಿ ಸುಷ್ಮಾ ಹಾಗೂ ಶ್ರೀ ಜಗದೀಶ ದಂಪತಿಗಳಿಗೆ, ಮಲ್ಲಿಕಾರ್ಜುನ್ ಅವರಿಗೆ ನಾನು ಅಕ್ಷರಶಃ ಶರಣು.
ಕಾರವಾರದ ಕರಾವಳಿ ಮಡಿಲಿಂದ ಐನೂರುಮೈಲು ದೂರ ಹಾರಿ, ಬಳ್ಳಾರಿಯ ಬಿಸಿಲ ತೊಟ್ಟಿಲಿನಲ್ಲಿ ಇಂತಹ ಅನುಪಮ ಸಾಹಿತ್ಯೋತ್ಸವದ ಬೆಳದಿಂಗಳಲ್ಲಿ ಮೀಯುವಂತಾಗಿದ್ದು ನಿಮ್ಮಿಂದ ಮತ್ತು ನೀವು ಬರೆಸಿದ ಅಕ್ಷರಗಳಿಂದ. ಹಾಗಾಗಿ ನಾನು ನಿಮಗೆ ಮತ್ತು ಅಕ್ಷರಗಳಿಗೆ ಚಿರ ಋಣಿ. ಸತತ ಪ್ರವಾಸ, ಕಾರ್ಯಕ್ರಮ ಹಾಗೂ ಕೆಲವು ಒತ್ತಡಗಳಿಂದ ಈ ಎಲ್ಲ ಸಂಭ್ರಮದ ವಿವರ ನಿಮಗೊಪ್ಪಿಸಲು ನಾಲ್ಕೈದು ದಿನ ತಡವಾಯಿತು.
ಕ್ಷಮೆಯಿರಲಿ.. ”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
*****