ಅನುದಿನ ಕವನ-೫೧೦, ಕವಯತ್ರಿ: ಮಧುರ ವೀಣಾ, ಬೆಂಗಳೂರು

ಇಲ್ಲಗಳು ಸೇರಿ ಇದೆಯೆಂದಾಗಬಹುದು
ಇಂದುಗಳು ಸೇರಿಯೇ ಮುಂದು
ನಾಳಿನಾ ಜೀವನಕೆ ಇಂದೇ ಅಡಿಗಲ್ಲು
ಮಥಿಸಿ ಮಥಿಸಿ ಅಮೃತದ ಹುಟ್ಟು

ಕಾಳಿಂಗದಂತ ದಿನ ರಾತ್ರಿಗಳ ಕಳೆದು
ಕರ್ಮದ ಮರ್ಮವ ಅಗೆದು ಬಗೆದು
ಶುಭ್ರ ತಿಳಿ ನಕಾಶೆ ಮೂಡುವುದು
ಕಣ್ಮುಂದೆ ಕೊನೆಯಂತಿಹ ಪಯಣಕೆ

ಸಹಚರರು ಇಲ್ಯಾರೂ ಕಾಣದಿಹರು
ದಿಕ್ಸೂಚಿಯೊಂದು ದಾರಿ ತೋರಿಹುದು
ಸಹಾಯ ಸಹಪಯಣ ನಿಲುಕದಿಹುದು
ಹೊರೆ ಕಳಚಿ ಹಗುರಾಗಿ ಸಾಗುವಿಚ್ಛೆ

ಹಗುರಾಗುವಾ ನಿಯಮ ಕಗ್ಗಂಟು
ಗುರಿ ಆಯ್ದುಕೊಳ್ಳಲು ನಕಾಶೆಯಿದೆ
ದಾರಿ ತೋರಲು ದಿಕ್ಕು ಸೂಚಿ
ಹೆಗಲ ಮೇಲಂಟಿದ ಈ ಹೊರೆ

ಎನಿತು ಕಠಿಣವಾಗಿಸಿತು ಈ ಪಯಣವ

-ಮಧುರ ವೀಣಾ, ಬೆಂಗಳೂರು
*****