ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದ ಸೀನಿಯರ್ ಅಂಡರ್ ಸೆಕ್ರೆಟರಿ ಆಗಿದ್ದ ಶ್ರೀಮತಿ ಸರೋಜಿನಿ ಮಹಿಷಿ ಅವರ ಸಹೋದರರೊಮ್ಮೆ ಸರ್ಕಾರಿ ಕೆಲಸದ ನಿಮಿತ್ತ ಬಳ್ಳಾರಿಗೆ ಬಂದಿದ್ದರು. ಸಂಗೀತ ಪ್ರೇಮಿಗಳಾಗಿದ್ದ ಅವರು ವಚನಗಳನ್ನು ಹಾಡುವ ಕಲಾವಿದರು ಬಳ್ಳಾರಿಯಲ್ಲಿ ಯಾರಿದ್ದಾರೆಂದು ವಿಚಾರಿಸಿ, ತಿಳಿದುಕೊಂಡು ಬಳ್ಳಾರಿ ಕಲಾಪ್ರೇಮಿ ಸಂಘಕ್ಕೆ ಬಂದು ಚಂದ್ರಶೇಖರ ಗವಾಯಿಗಳನ್ನು ಭೇಟಿಯಾಗಿ ಮಾತನಾಡಿ ಅವರ ಕಂಠಸಿರಿಯಿಂದ ಶರಣರ ವಚನಗಳನ್ನಾಲಿಸಿ ಆನಂದ ಪಟ್ಟರು. ಚಂದ್ರಶೇಖರ ಗವಾಯಿಗಳು,“ನಾನೇ ಗೆಸ್ಟ್ ಹೌಸಿಗೆ ಬಂದು ಹಾಡುತ್ತಿದ್ದೆ” ಎಂದು ಸೌಜನ್ಯತೆಯಿಂದ ಹೇಳಿದಾಗ “ವಿನಮ್ರತೆಯಿಂದ-“ನಮಗೆ ನೀರು ಬೇಕಾದರೆ ಕೆರೆಗೋ-ಬಾವಿಗೋ ನಾವೇ ಹೋಗಬೇಕು! ಅವು ನಾವಿದ್ದಲ್ಲಿಗೆ ಬರುವುದಿಲ್ಲ!!” ಎಂದರು. ಇವರಿಬ್ಬರ ನಡುವಣ ಸಂಭಾಷಣೆ ಒಂದು ಸಾಂಸ್ಕೃತಿಕ ವಿನಿಮಯವಾಗಿತ್ತು.
** ಹಿಂದೆ ಬಳ್ಳಾರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಗಗನ್ ದೀಪ್, ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯದರ್ಶಿಯಾಗಿದ್ದ-ಕಾಂಬ್ಳೆಯವರು ಸಂಗೀತ ಪ್ರೇಮಿಗಳಾಗಿದ್ದು ಒಂದು ವರ್ಷ ಚಂದ್ರಶೇಖರ ಗವಾಯಿಗಳಲ್ಲಿ ಸುಗಮ ಸಂಗೀತ, ಭಕ್ತಿಗೀತೆ, ಭಾವಗೀತೆ ಗಾಯನ ಕಲಿತಿದ್ದರು. ಇವರಿಚ್ಛೆ ಮೇರೆಗೆ ಬಳ್ಳಾರಿಯ ʼಸ್ವರ ಸಂಗಮʼ ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿದ್ದ ಒಂದು ದೊಡ್ಡ ಕಾರ್ಯಕ್ರಮದಲ್ಲಿ ಈ ಇಬ್ಬರೂ ಅಧಿಕಾರಿಗಳು- ಗುರುಗಳಿಗೆ ದೊಡ್ಡ ಮೊತ್ತದ ನಿಧಿ ಅರ್ಪಿಸಿದ್ದರು. ಇದು ಕಳೆ ಕಟ್ಟಿದ ವರ್ಣರಂಜಿತ ಕಾರ್ಯ ಕ್ರಮವಾಗಿತ್ತಲ್ಲದೆ ಗವಾಯಿಗಳ ಜೀವನದ ಮಹತ್ವದ ಘಟನೆಯಾಗಿತ್ತು.
ಜೀವನದುದ್ದಕ್ಕೂ ಸಂಗೀತವೇ-ಉಸಿರು!, ಸಂಗೀತವೇ-ಬದುಕು!!, ಸಂಗೀತವೇ-ಬಾಳಿನ ಬೆಳಕು!!! ಸಂಗೀತವೇ ಅದಕು! ಇದಕು!! ಎದಕು!!!-ಎಂಬಂತೆ ಸಂಗೀತ ಶಾರದೆಯನ್ನಾರಾಧಿಸುತ್ತಾ ಸೇವೆಗೈದ ಹಾಗೂ ಗೈಯುತ್ತಲಿರುವ ಕಲಾವಿದರ ಪರಂಪರೆಗೆ ಸೇರಿದವರಲ್ಲಿ ಬಳ್ಳಾರಿಯ ಕೀ.ಶೇ. ಎ. ಚಂದ್ರಶೇಖರ ಗವಾಯಿಗಳು ಪ್ರಮುಖರು. ಬಳ್ಳಾರಿ ಹತ್ತಿರದ ಅಂತಾಪುರ ಗ್ರಾಮದಲ್ಲಿ 13.6.1933 ರಂದು ಜನಿಸಿದ ಇವರಿಗೆ ಸಂಗೀತದ ಸರಿಗಮ ಕಲಿಸಿದ ಮೊದಲಗುರು-ಮರಿಯಣ್ಣ ಮಾಸ್ತರು. ಮುಂದೆ-ಸವಣೂರು ಕೃಷ್ಣಾಚಾರ್ಯ, ಸಿದ್ಧರಾಮ ಜಂಬಲದಿನ್ನಿ ಮತ್ತು ಡಾ.ಪಂ.ಪುಟ್ಟರಾಜ ಗವಾಯಿಗಳಲ್ಲಿ ಸಂಗೀತಾಧ್ಯಯನ ಮಾಡಿದರು. ಈ ಗುರುತ್ರಯರ ಗರಡಿಯಲ್ಲಿ ಪಳಗಿ, ಅವರ ಕಸುವನ್ನು ಹೀರಿಕೊಂಡು ಬೆಳೆದು ಕಲಾವಿದರಾಗಿ ರೂಪುಗೊಂಡವರು ಚಂದ್ರಶೇಖರ ಗವಾಯಿಗಳು. ಕರ್ನಾಟಕ ಸಂಗೀತವೇ ಪ್ರಮುಖವಾಗಿ ಪ್ರಚಲಿತವಿದ್ದ ಬಳ್ಳಾರಿಯಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಗಟ್ಟಿನೆಲೆ ಒದಗಿಸಿ, ಉಳಿಸಿ-ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಪ್ರತಿಭೆಗೆ ನಿದರ್ಶನವಾಗಿ ಹೇಳುವುದಾದರೆ ಒಂದು ಗೀತೆ ಇವರ ಕೈಗೆ ಸಿಕ್ಕ ಹತ್ತು-ಹದಿನೈದು ನಿಮಿಷದೊಳಗೆ ಅದಕ್ಕೆ ಸುಂದರ ರಾಗ ಸಂಯೋಜನೆ ಮಾಡಿ ಹಾಡುವ-ಶಿಷ್ಯರಿಂದ ಹಾಡಿಸುವ ಕುಶಲತೆ ಇವರಿಗೆ ಕರತಲಾಮಲಕವಾಗಿತ್ತು. ಇವರು ಸಾಹಿತ್ಯ ಪ್ರೇಮಿಗಳೂ ಆಗಿದ್ದರು. ಭಾವಗೀತೆಗಳಲ್ಲಿ ಬರುವ ಪರಿಕಲ್ಪನೆಗಳ ಬಗ್ಗೆ ಚರ್ಚಿಸುತ್ತಿದ್ದರು.
ಇವರು ನೀಡಿದ ಸ್ಥಳೀಯ ಹಾಗೂ ಇತರ ಸ್ಥಳಗಳಲ್ಲಿಯ ಸಂಗೀತ ಕಾರ್ಯಕ್ರಮಗಳು ಅನೇಕ. ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಎರಡು ಬಾರಿ ನವರಸಪುರ ಉತ್ಸವ(ಎರಡನೆ ಬಾರಿ ಅವಕಾಶ ಸಿಗುವುದು ಅಪರೂಪ)ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ಏರ್ಪಡಿಸುವ-ಕಾರ್ಯಕ್ರಮ. ಹೀಗೆ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ ಹಿರಿಮೆ ಇವರದು.
ಇವರಿಗೆ ಸಂದ ಗೌರವಗಳು: ಹಲವು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಕರ್ನಾಟಕ ಸರ್ಕಾರದ ಸಂಗೀತ ನೃತ್ಯ ಅಕಾಡೆಮಿಯ-ʼಕರ್ನಾಟಕ ಕಲಾಶ್ರೀʼ, ಗದುಗಿನ ವೀರೇಶ್ವರ ಪುಣ್ಯಾಶ್ರಮದ ವತಿಯಿಂದ ಪೂಜ್ಯ ಪುಟ್ಟರಾಜ ಗವಾಯಿಗಳು ನೀಡಿದ ʼಸಂಗೀತ ಸುಧಾಕರʼ-ಹೀಗೇ ಇನ್ನೂ ಅನೇಕಾನೇಕ ಪ್ರಶಸ್ತಿಗಳಿಂದ-ಗೌರವಿತರಾಗಿದ್ದಾರೆ.
ಹೆಗ್ಗಳಿಕೆ: 1) ಸುಪ್ರಸಿದ್ಧ ನಟ-ನಿರ್ದೇಶಕ ಸುನೀಲ್ ಪುರಾಣಿಕರು-ಮುದ್ದು ಮೋಹನ್ ಅವರ ಪ್ರೇರಣೆಯಿಂದ ಗವಾಯಿಗಳ ಬಗ್ಗೆ 20 ನಿಮಿಷಗಳ ಸಾಕ್ಷ್ಯ ಚಿತ್ರ ನಿರ್ಮಿಸಿದ್ದಾರೆ.
2. ಬಳ್ಳಾರಿ ಕಲಾ ಪ್ರೇಮಿ ಸಂಘ ಪ್ರಯೋಗಿಸುತ್ತಿದ್ದ ಅನೇಕ ನಾಟಕಗಳ-ಸಂಗೀತ ನಿರ್ದೇಶನ ನೀಡುತ್ತಿದ್ದರು. ಕಲಾಪ್ರೇಮಿ ಸಂಘ ಗವಾಯಿಗಳ ಸಂಗೀತ ಸಾಧನೆಯ ತಪೋಭೂಮಿಯಾಗಿತ್ತೆಂಬುದು ಅತಿಶಯೋಕ್ತಿಯಲ್ಲ!
3.ನೂರಾರು ಭಾವಗೀತೆ-ಭಕ್ತಿಗೀತೆ-ವಚನ-ದಾಸರಪದಗಳಿಗೆ ರಾಗ ಸಂಯೋಜಿಸಿದ್ದಾರೆ. ಇವರಿಂದ ಸ್ವರ ಸಂಯೋಜಿತ ಗೀತೆಗಳ ಅನೇಕ ಧ್ವನಿ ಸುರುಳಿ ಹೊರಬಂದಿವೆ.
4.ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಸುಸಂದರ್ಭದಲ್ಲಿ ವಿಶೇಷ ಅಹ್ಚಾನಿತರಾಗಿ ಸನ್ಮಾನಿಸಲ್ಪಟ್ಟವರಲ್ಲಿ ಚಂದ್ರಶೇಖರ ಗವಾಯಿಗಳೂ ಒಬ್ಬರು. ಇದು ಕೇಂದ್ರ ಸರ್ಕಾರದ ಗೌರವ!.
5.ಇವರ ದಪ್ಪ, ಗಟ್ಟಿ ಹಾಗೂ ಸುಶ್ರಾವ್ಯ ಕಂಠದ ಗಾಯನ, ಶ್ರೋತೃಗಳನ್ನು ಮುದಗೊಳಿಸುವುದರೊಂದಿಗೆ, ಒಂದು ರೋಚಕ ದಿವ್ಯಾನಂದದ ರಸಾನುಭೂತಿ ನೀಡುತ್ತಿತ್ತು.
ಚಂದ್ರಶೇಖರ ಗವಾಯಿಗಳ ಶಿಷ್ಯಬಳಗ : ಕಂದಗಲ್ಲರ “ರಕ್ತರಾತ್ರಿ” ನಾಟಕದ 2000ಕ್ಕೂ ಹೆಚ್ಚು ಪ್ರಯೋಗಗಳಲ್ಲಿ ದ್ರೌಪದಿ ಪಾತ್ರ ನಿರ್ವಹಿಸಿ, ಸರ್ವಋತು ಕೋಗಿಲೆಯೆಂದೇ ಹೆಸರಾದ, ಅಮೇರಿಕದ “ಅಕ್ಕ”ಸಮ್ಮೇಳನದಲ್ಲಿ ಗಾನಾಮೃತಧಾರೆ ಹರಿಸಿದ-ಕೀ.ಶೇ.ಸುಭದ್ರಮ್ಮ ಮನ್ಸೂರ್, ದೇಶ-ವಿದೇಶಗಳಲ್ಲಿ ತಮ್ಮ ಸಂಗೀತದ ಕಂಪು-ಪಸರಿಸಿದ ನಿವೃತ್ತ ಐ.ಎ.ಎಸ್.ಅಧಿಕಾರಿ-ಮುದ್ದುಮೋಹನ್, ಬೆಂಗಳೂರ ಸ್ವರಶ್ರೀ ಮ್ಯೂಜಿಕ್ ಅಕಾಡೆಮಿ ಮುಖ್ಯಸ್ಥ-ಸಂಘಟಕ-ಜೆ. ಆರ್. ಗುರುರಾಜ್, ಬೆಂಗಳೂರ ಸುಸ್ವರ ಬಳಗದ ಮುಖ್ಯಸ್ಥ- ಬಿ.ಬಿ.ಕುಲಕರ್ಣಿ, ಗಾಯಕ-ತಬಲಾ ವಾದಕ-ಕೆನರಾ ಬ್ಯಾಂಕ್ ನಿವೃತ್ತಾಧಿಕಾರಿ-ಕೆ.ಎಸ್.ಸತ್ಯನಾರಾಯಣ, ನಿವೃತ್ತ ಪ್ರೊಫೆಸರ್ ಡಾ. ಆರ್.ಆರ್. ಬಾಡಗಂಡಿ, ಬಳ್ಳಾರಿ ಮೆಡಿಕಲ್ ಕಾಲೇಜು ಮತ್ತು ಬೆಂಗಳೂರು ಮಿಂಟೋ ಕಣ್ಣಾಸ್ಪತ್ರೆಯ ನೇತ್ರತಜ್ಞೆ ನಿವೃತ್ತ ಪ್ರೊಫೆಸರ್ ಡಾ.ಆರ್.ವತ್ಸಲಾ, ಖ್ಯಾತ ಗಾಯಕಿ ದಿ. ವಿಜಯ ಕಿಶೋರ್, ದಿ. ಸಿ.ವಿ.ಆರ್ ವರ್ಮ, ದಿ. ತ್ರಿಕಮ್‌ಜಿ ಜೈನ್, ದಿ. ಜಂಬುನಾಥ, ದಿ. ರಜನೀಶ್ ಕುಲಕರ್ಣಿ, ರೇಲ್ವೆ ಇಲಾಖೆ ಉದ್ಯೋಗಿ-ರಾಧಾ, ಜಯಶ್ರೀ ಭಟ್, ನಿವೃತ್ತ ಜಿಲ್ಲಾ ವಾರ್ತಾಧಿಕಾರಿ ಚಂದ್ರಕಾಂತ್, ನಾರಾಯಣಪ್ಪ, ಶೈಲಜಾ ಶ್ರೀಕಂಠ, ಬಸವರಾಜ್ ಮೋರಗೇರಿ, ಎಂ ಅಹಿರಾಜ್-ಹೀಗೆ ಇವರ ಶಿಷ್ಯ ಪರಂಪರೆ ದೊಡ್ಡದಿದೆ.
ಬೆಂಗಳೂರಿನ ಕವಿ, ಸಾಹಿತಿ, ನಿರೂಪಕ ಟಿ. ಗುರುರಾಜಾಚಾರ್ ಜಹಗಿರ್‌ದಾರ್, ಬಳ್ಳಾರಿಯ ಪೋಲಕ್ಸ್ ಜೀನ್ಸ್ ಸಿದ್ಧ ಉಡುಪುಗಳ ಪ್ರಸಿದ್ಧ ಉದ್ಯಮಿ, ಹವ್ಯಾಸಿ ಹಾರ್ಮೋನಿಯಮ್ ವಾದಕ ಎಚ್.ಎಂ.ಹನುವಂತಪ್ಪ, ವಿಮ್ಸ್ ನಿವೃತ್ತ ಕಚೇರಿ ಅಧೀಕ್ಷಕ-ಸಾಹಿತಿ ಟಿ.ಕೆ.ಗಂಗಾಧರ ಪತ್ತಾರ್ ಮುಂತಾದವರು ಚಂದ್ರಶೇಖರ ಗವಾಯಿಗಳ ಆಪ್ತ ವಲಯದ ಅತ್ಮಿಯ ಸಂಗೀತ ಬಂಧುಗಳು.
ಸುಮಾರು ಐದು ದಶಕಗಳ ವರೆಗೆ ಸಂಗೀತ ಶಾರದೆಯ ಕೈಂಕರ್ಯಗೈದ ಚಂದ್ರಶೇಖರಗವಾಯಿಗಳು 27.5.2002 ರಂದು ನಾದೈಕ್ಯರಾದರು.
ಇವರ ಪುಣ್ಯಸ್ಮರಣೆಯ ಕಾರ್ಯಕ್ರಮ 29.5.2022 ಭಾನುವಾರ ಬೆಂಗಳೂರು ಬಸವನಗುಡಿಯ “ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ ಕಲ್ಚರ್” ಸಭಾಂಗಣದಲ್ಲಿ “ಕರ್ನಾಟಕ ಕಲಾಶ್ರೀ, ಗಾಯನಾಚಾರ್ಯ ಪಂಡಿತ್ ದಿ. ಎ.ಚಂದ್ರಶೇಖರ ಗವಾಯಿಗಳ ಪುಣ್ಯಸ್ಮರಣೆ ಸಂಗೀತೋತ್ಸವ ಸಮಿತಿ” ಹಮ್ಮಿಕೊಂಡಿದೆ.
–ಟಿ.ಕೆ.ಗಂಗಾಧರ ಪತ್ತಾರ, ಹಿರಿಯ ಸಾಹಿತಿ, ಬಳ್ಳಾರಿ.