ಅನುದಿನ ಕವನ- ೫೧೪, ಕವಿ: ಎ. ಎನ್. ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ನಗೆಪಾಟಲು

“ಇದು ನಮ್ಮ ನಿಮ್ಮದೇ ಬದುಕಿನ ಕವಿತೆ. ಸುತ್ತಲಿನ ಒತ್ತಡಗಳಿಗೆ ಮಣಿಯದೆ ಮುನ್ನಡೆವ ಪ್ರತಿ ಜೀವದ ಭಾವಗೀತೆ. ಸೈತಾನರ ಕಂಗಳಲ್ಲಿ ಸಂತನೆಂದೂ ನಗೆಪಾಟಲೇ.. ಭ್ರಷ್ಟರ ಬಾಯಲ್ಲಿ ನಿಷ್ಟರ ಬದುಕೆಂದು ಕುಚೋದ್ಯದ ಪರಿಪಾಟಲೇ.. ಇದು ಎಲ್ಲರ ಲೋಕಾನುಭವವೂ ಹೌದು. ಹಲವರ ಸ್ವಾನುಭವವೂ ಹೌದು. ಏನಂತೀರಾ..?”                                            -ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇

ನಗೆ ಪಾಟಲು..!

ನಗ್ನತೆಯ ನಗರದಲ್ಲಿ
ಬೆತ್ತಲೆ ಇರುವವರೆಲ್ಲಾ
ನನ್ನ ನೋಡಿ ನೋಡಿ
ಬಿದ್ದು ಬಿದ್ದು ನಗುತ್ತಿದ್ದಾರೆ
ಅವರ ನಡುವೆ ನಾನೊಬ್ಬ
ಬಟ್ಟೆತೊಟ್ಟು ನಿಂತಿದ್ದೇನೆಂದು.!

ಅಂಧಕಾರದ ಬೀದಿಯಲ್ಲಿ
ಕತ್ತಲೆ ಮನೆಯವರೆಲ್ಲಾ
ನನ್ನೆಡೆಗೆ ಕೈತೋರಿ ತೋರಿ
ಹಿಡಿಶಾಪ ಹಾಕುತ್ತಿದ್ದಾರೆ
ಅವರ ಮಧ್ಯೆ ನಾನೊಬ್ಬ
ದೀಪಹಚ್ಚಿ ಕುಳಿತಿದ್ದೇನೆಂದು.!

ಶಿಖರವೇರುವ ಹಾದಿಯಲ್ಲಿ
ವಂಚನೆರೆಕ್ಕೆ ತೊಟ್ಟವರೆಲ್ಲಾ
ನನ್ನ ಗೇಲಿ ಮಾಡಿ ಮಾಡಿ
ಮೇಲೆ ಹಾರಿ ಹೋಗುತ್ತಿದ್ದಾರೆ
ಮೆಟ್ಟಿಲೆಣಿಸುತ ನಾನೊಬ್ಬ
ನೇರದಾರಿ ಏರುತ್ತಿದ್ದೇನೆಂದು.!

ಬದುಕಿನಾ ಪಯಣದಲ್ಲಿ
ಎದೆಸತ್ತ ಸುತ್ತಮುತ್ತಲಿನವರೆಲ್ಲಾ
ಅಣಕಿಸಿ, ಕುಹಕಿಸಿ, ಕೆಣಕಿದರೂ
ನಗು ನಗುತ ಸಾಗುತ್ತಿದ್ದೇನೆ
ನನ್ನೊಳಗೆ ನಾನೇ ಬೀಗುತ್ತಿದ್ದೇನೆ
ನನ್ನಾತ್ಮಸಾಕ್ಷಿ ಕೊಂದುಕೊಳ್ಳದೆ
ನಿತ್ಯ ಸತ್ಯದಿ ನಡೆಯುತ್ತಿದ್ದೇನೆಂದು.!

-ಎ.ಎನ್.ರಮೇಶ್. ಗುಬ್ಬಿ.