ದೇವ ಕಣಗಿಲೆಯು… ವಿರೂಪಾಕ್ಷನೂ..
ಈ ಪುರಾತನ ದೇವ ಕಣಗಿಲೆ ಮರ ನನಗೆ ಸದಾ ವಿಸ್ಮಯವಾಗಿ ಕಾಡಿದೆ. ಈಗ ಕಾಣುತ್ತಿರುವಂತೆ ಹಸಿರೆಲೆ ಮತ್ತು ಹೂಗಳಿಂದ ನಳನಳಿಸುತ್ತಿದೆ. ಕೆಲವೊಮ್ಮೆ ಇಡೀ ಮರ ಎಲೆ ಇಲ್ಲದೆ ಬೋಳಾಗಿದ್ದರೂ ಹೂಗಳಿಂದ ಕಂಗೊಳಿಸುತ್ತಿರುತ್ತದೆ. ಸದಾ ಕಾಲ , ಅತ್ಯಂತ ಪರಿಮಳದಿಂದ ಕೂಡಿದ ಈ ದೇವಕಣಗಿಲೆ ಒಂದು ಅಚ್ಚರಿ. ಈ ಪುರಾತನ ಮರ ಹೇಮಕೂಟದ್ದು. ಅಂತೆಯೇ ವಿಠ್ಠಲದೇಗುಲ, ಕಮಲ ಮಹಲ್, ಮಾಲ್ಯವಂತದಲ್ಲೂ ಇವೆ. ವಿಠ್ಠಲ ಮತ್ತು ಹೇಮಕೂಟದಲ್ಲಿ ತುಸು ಹಳದಿ ಮಿಶ್ರಿತ ಬಿಳಿ ಹೂವಾಗಿದ್ದರೆ ಮಾಲ್ಯವಂತ ಮತ್ತು ಕಮಲ್ ಮಹಲ್ ಸಂಕೀರ್ಣದಲ್ಲಿ ಕೆಂದಾಗಿವೆ. ಇತ್ತಿಚಿಗೆ ಕೆಲವು ಸ್ಮಾರಕಗಳ ಬಳಿ ನೆಡಲಾಗಿವೆ. ಅವಕ್ಕೆ ಇತಿಹಾಸವಿಲ್ಲ. ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಇವು ಇದೆ ಎಂದು ನಂಬಲಾಗಿದೆ. ಇದರ ಬಗ್ಗೆ ಸಸ್ಯ ಶಾಸ್ತ್ರಜ್ಞರು ಬೆಳಕು ಚೆಲ್ಲಬೇಕಿದೆ.
ಹೂ ಗಿಡ ಸ್ಮಾರಕಗಳ ಬಳಿ ಇದ್ದರೆ ಚೆಂದ. ಇತ್ತೀಚಿಗೆ ಕೇವಲ ಕಣಗಿಲೆ ಗಿಡ ಮಾತ್ರ ನೆಡಲಾಗುತ್ತಿದೆ.
ಕೇವಲ ಕಮಲ್ ಮಹಲ್ ಬಳಿ ಕಕ್ಕೆ ಹೂ ಗಿಡವಿದೆ. ವಸಂತ ಕಾಲದಲ್ಲಿ ಅರಳಿ ಮನಸೂರೆಗೊಳ್ಳುತ್ತದೆ.
ಅಂತೆಯೇ ಈ ಬಿರು ಬಿಸಿಲು ಪ್ರದೇಶಕ್ಕೆ ಬಾಳಿ ಬದುಕ ಬಲ್ಲ ಋತುಮಾನಗಳಲ್ಲಿ ಅರಳಬಲ್ಲ (ಸುವಾಸಿತ ಇರದಿದ್ದರು ಪರವಾಗಿಲ್ಲ) ಚೆಂದನೆಯ ಹೂ ಗಿಡಗಳನ್ನು ನೆಟ್ಟರೆ ನೋಡಲಿಕ್ಕೆ ಅಂದ ಮತ್ತು ಸ್ಮಾರಕಗಳ ಅಂದವೂ ಇಮ್ಮಡಿಸುತ್ತದೆ. ಪುರಾತತ್ವ ಇಲಾಖೆಯ ತೋಟದ ಉಸ್ತುವಾರಿ ವಹಿಸಿಕೊಳ್ಳುವ ವಿಭಾಗದ ಅಧಿಕಾರಿಗಳು ಇತ್ತ ಕಡೆ ಗಮನಹರಿಸಬೇಕು.
ವಿಜಯವಿಠ್ಠಲದ ಮುಕ್ಕಾಲು ಕಿಲೋಮೀಟರ್ ಹಾದಿಯನ್ನು ಈ ಋತುಮಾನದ ಹೂಗಿಡ ಇರುವಂತೆ ಕಲ್ಪಿಸಿನೋಡಿ.ದಾರಿಹೋಕರಿಗೆ ನೆರಳಾಗಿ, ವಿವಿಧ ಋತುಗಳಲ್ಲಿ ಹೂ ಅರಳಿ ಅದೆಂತೆ ಸುಂದರ ನೋಟ. !
ಹನ್ನೆರಡನೆಯ ಶತಮಾನದ ಕೊನೆ ಮತ್ತು ಹದಿಮೂರರ ಆರಂಭ ಭಾಗದಲ್ಲಿ ಬದುಕಿದ್ದ ಕವಿ ಹರಿಹರ ಪಂಪಾ ವಿರೂಪಾಕ್ಷನಿಗೆ ಮುಡಿಸಲು ಹೂಗಳ ಕುರಿತಾದ ಪುಷ್ಪ ರಗಳೆ ರಚಿಸಿದ್ದು ಇಲ್ಲಿಯೇ. ಹೂಗಳ ಕುರಿತು ಇಂತಹ ಸಾಹಿತ್ಯ ಪರಂಪರೆಯನ್ನು ಹೊಂದಿರುವ ನಾವು ಇಂದು ಹಳೆಯ ಸೊಬಗಿಗೆ ಮರಳಬೇಕಿದೆ
ಈ ಸೌಂದರ್ಯ ಅರಳಿಸುವ ಸೌಂದರ್ಯ ಪ್ರಜ್ಞೆ ನಮ್ಮ ಭಾರತೀಯ ಪುರಾತತ್ವ ವಿಭಾಗಕ್ಕೆ ಬರಲಿ ಎಂದು ವಿರೂಪಾಕ್ಷನಲ್ಲಿ ಬೇಡುವೆ
-ಶಿವಶಂಕರ ಬಣಗಾರ, ಹೊಸಪೇಟೆ
*****