ಕವಿತೆಯೆಂದರೆ……
ಕವಿತೆಯೆಂದರೆ ಏನು?
ಏನಲ್ಲ?
ಕವಿತೆಯೆಂದರೆ ಕತ್ತಲೆ
ಬೆಳಕಿನಾಟ
ದ ಜೀವನರಂಗ
ಮಂಚ.
ಕವಿತೆಯೆಂದರೆ ಸಮುದ್ರ
ತೀರ
ದ ಸತ್ತ ಮೀನು
ಅರಳಿಸುವ ಮಲ್ಲಿಗೆ
ಸುವಾಸನೆ,
ಕವಿತೆಯೆಂದರೆ ಹೆಣ್ಣು
ನಾಗರ
ಇಟ್ಟ ನೂರೊಂದು ಮೊಟ್ಟೆ
ಗಳೊಡೆದು ಬಂದ
ನವಿಲುಗರಿಗಳು.
ಕವಿತೆಯೆಂದರೆ ಪ್ರೇಯಸಿ
ಕೊಟ್ಟ ಮುತ್ತು
ಒಡೆದುಹೋಗಿ
ಧಾರಾವಾಹಿಯಾದ ನಿರೀಕ್ಷೆ.
ಕವಿತೆಯೆಂದರೆ ಬೀಸಣಿಗೆ
ಯ ಬಣ್ಣದ ರೆಕ್ಕೆ
ಯ ಗಿಣಿಮರಿ
ಗೆ ಮಾತು ಕಲಿಸಹೊರಟ
ಮಗು.
ಕವಿತೆಯೆಂದರೆ ನಾಳೆ
ಹಾರಿ ಹೋಗುತ್ತದೆ
ಎಂದು ಗೊತ್ತಿದ್ದರೂ ಇಂದು
ಗುಟುಕು ನೀಡುವ
ತಾಯಿಹಕ್ಕಿ.
ಕವಿತೆಯೆಂದರೆ ಅಕ್ಷತಯೋನಿ
ಒಂಬತ್ತು ಹೆತ್ತು ಮೂಲೆಯಲ್ಲಿ
ಕೂತ ಅಡುಗೂಲಜ್ಜಿ
ಕತೆ.
ಕವಿತೆಯೆಂದರೆ ತಾಯಿ
ಹುಲ್ಲೆಯನು ಕೊಂದು
ತಿಂದು
ಎಳೆಹುಲ್ಲೆಗೆ ತಾಯಿ
ಯಾಗಿ ಹಾಲೂಡಿಸಿದ ಹೆಣ್ಣು
ಹುಲಿ.
ಕವಿತೆಯೆಂದರೆ
ಕೊನೆಗೂ ಏನುಂಟು?
ಏನಿಲ್ಲ?
ಅಹ್ ಕವಿತೆಯೇ ಅಂತಿಮ
ವಾಗಿ ನೀನೇ ಎಲ್ಲ,
ನಾನೆಲ್ಲೂ ಇಲ್ಲ.
-ಪ್ರೇಮಶೇಖರ, ಚಾಮರಾಜನಗರ