ಗಜಲ್
ಜೀವನ ನಾಲ್ಕು ದಿನದ ಸಂತೆ ಎನಿಸುವುದು ಮಣ್ಣಿಗೆ ಹೋದಾಗ
ನಾನು ಎಂಬುದು ಸುಳ್ಳು ಎಂದು ತಿಳಿಯುವುದು ಮಣ್ಣಿಗೆ ಹೋದಾಗ
ಯಾರಿಗೆ ಯಾವಾಗ ಏನಾಗುವುದೋ ಬಲ್ಲವರಾರು ಬುವಿಯಲಿ
ಬದುಕಿ ಬಾಳುವೆನೆಂಬ ನಂಬಿಕೆ ಭ್ರಮನಿರಸನವಾಗುವುದು ಮಣ್ಣಿಗೆ ಹೋದಾಗ
ಆಸೆಗಳನು ಪಡುತಾ ಕನಸುಗಳನು ಕಾಣುತಾ ದಿನಗಳನು ಕಳೆಯುವರು
ನರಮನುಷ್ಯರ ಬದುಕಿನ ನಿಜ ದರ್ಶನವಾಗುವುದು ಮಣ್ಣಿಗೆ ಹೋದಾಗ
ಉಸಿರಿದ್ದಾಗ ಹೆಸರು ಉಸಿರು ನಿಂತ ಮೇಲೆ ಹೆಣ ಶವ ಕಳೆಬರ ಪಾರ್ಥೀವ ಶರೀರ
ಕೋಟಿ ಇದ್ದರೂ ಬಿಡಿಗಾಸು ಒಯ್ಯಲಾಗದೆಂದು ಗೊತ್ತಾಗುವುದು ಮಣ್ಣಿಗೆ ಹೋದಾಗ
ನಾವು ಮಾನವರು ಸಂಘ ಜೀವಿ ಸಮಾಜ ಜೀವಿ ಸುತ್ತಲೂ ಅಪಾರ ಬಂಧು ಬಳಗ
ಏಕಾಂತ ಪಯಣ ತಪ್ಪದು ಎಂಬ ಕಟುಸತ್ಯ ಅರಿವಾಗುವುದು ಮಣ್ಣಿಗೆ ಹೋದಾಗ
ಪ್ರೀತಿಸುವ ದೇಹ ಮಣ್ಣಲಿ ಮಣ್ಣಾಗುವುದು ಬೆಂಕಿಯಲಿ ಸುಟ್ಟು ಬೂದಿಯಾಗುವುದು
ಋಣ ಇರುವವರೆಗೆ ಮಾತ್ರ ನಾವಿಲ್ಲಿ ಎಂದು ಮನವರಿಕೆಯಾಗುವುದು ಮಣ್ಣಿಗೆ ಹೋದಾಗ
ಬೆಂಗಾಲಿ ಸ್ಮಶಾನದಿಂದ ಮರಳಿದ ಮೇಲೆ ಪುನಃ ವ್ಯಾಮೋಹಗಳಲಿ ಲೀನ
ಜೀವನ ನಾಲ್ಕು ದಿನದ ಸಂತೆ ಎಂದು ಮತ್ತೆ ನೆನಪಾಗುವುದು ಮಣ್ಣಿಗೆ ಹೋದಾಗ
-ಈರಣ್ಣ ಬೆಂಗಾಲಿ, ರಾಯಚೂರು
*****