ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿದ ಚೇಳ್ಳಗುರ್ಕಿ ಶ್ರೀ ಎರ್ರಿಸ್ವಾಮಿಗಳ ಮಹಾರಥೋತ್ಸವ

ಬಳ್ಳಾರಿ, ಜೂ.5: ತಾಲ್ಲೂಕಿನ ಚೇಳ್ಳಗುರ್ಕಿ ಗ್ರಾಮದ ಶ್ರೀ ಎರ್ರಿಸ್ವಾಮಿಗಳ ಮಹಾರಥೋತ್ಸವ ಕಾರ್ಯಕ್ರಮ ಅತ್ಯಂತ ಸಂಭ್ರಮ ಸಡಗರದಿಂದ ಸಾವಿರಾರು ಭಕ್ತ ಸಮೂಹ ಮಧ್ಯೆ ಭಾನುವಾರ ಸಂಜೆ ನಡೆಯಿತು.
ಮಹಾರಥೋತ್ಸವಕ್ಕೆ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಸಾವಿರಾರು ಜನ ಭಕ್ತಾದಿಗಳು ಆಗಮಿಸಿ ಹೂ ಹಣ್ಣುಗಳನ್ನು ಅರ್ಪಿಸಿ,
ಕರ್ಪೂರದಾರತಿಯ ವಿಶೇಷ ಸೇವೆಯನ್ನು ಸಲ್ಲಿಸುವುದರ ಮೂಲಕ ತಾತನ ಆಶೀರ್ವಾದಕ್ಕೆ ಪಾತ್ರರಾದರು.
ಶ್ರೀ ಎರ್ರಿಸ್ವಾಮಿ ಟ್ರಸ್ಟ್ ಕಮಿಟಿ ಮತ್ತು ದಾಸೋಹ ಸೇವಾ ಸಂಘ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಭಕ್ತಾದಿಗಳಿಗೆ ಸೌಲಭ್ಯಗಳನ್ನು ಒದಗಿಸಿದರು.
ರಥೋತ್ಸವದ ನಂತರ ಕರ್ಪೂರದಾರತಿ ಕಾರ್ಯಕ್ರಮವನ್ನು ಕೂಡ ಸಾವಿರಾರು ಭಕ್ತಾದಿಗಳು ನೆರವೇರಿಸುವ ಮೂಲಕ ತಮ್ಮ ಹರಿಕೆಯನ್ನು ತೀರಿಸಿದರು.


ಭಾನುವಾರ ಬೆಳಿಗ್ಗೆ ಸಪ್ತಭಜನೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಗಂಗೆ ಪೂಜೆ ಕಾರ್ಯಕ್ರಮ ನಡೆಯಿತು. ಸೋಮವಾರ(ಜೂ.6) ಸಂಜೆ 7 ಗಂಟೆಗೆ ಹೂವಿನ ರಥೋತ್ಸವ ನಂತರದಲ್ಲಿ ಆಕರ್ಷಕ ಬಾಣೋತ್ಸವ ಕಾರ್ಯಕ್ರಮ ನಡೆಯಲಿದೆ.
ಚೇಳ್ಳಗುರ್ಕಿ ಮಠಕ್ಕೆ ಉರವಕೊಂಡ ಗವಿಮಠದ ಉತ್ತರಾಧಿಕಾರಿ ಕರಿಬಸವರಾಜೇಂದ್ರ ಮಹಾಸ್ವಾಮಿಗಳು ದೇವಸ್ಥಾನ ಆಗಮಿಸಿ,ತಾತನ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿ, ಎರ್ರಿತಾತನವರು ಮಹಾ ತಪಸ್ವಿಗಳು, ಇವರ ತಪಸ್ಸಿನ ಫಲ, ಮಹಿಮೆಗಳನ್ನು ರಾಜ್ಯ ಮತ್ತು ಪಕ್ಕದ ರಾಜ್ಯದ ಭಕ್ತರು ನೋಡಿದ್ದಾರೆ. ಮೈಸೂರು ಮಹಾರಾಜರು ತಾತನ ದರ್ಶನ ಪಡೆದಿದ್ದರು. ಊರವಕೊಂಡ ಮಠ ಮತ್ತು ಚೇಳ್ಳಗುರ್ಕಿ ಮಠಕ್ಕೆ‌ ಅವಿನಾಭಾವ ಸಂಬಂಧವಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರು ಮಾಧ್ಯಮದವರೊಂದಿಗೆ ಮಾತನಾಡಿ ಇಲ್ಲಿನ ಜೀವ ಸಮಾಧಿಗೆ ಸುಮಾರು 100 ವರ್ಷಗಳ ಇತಿಹಾಸವಿದೆ.
ಪಕ್ಕದ ಜೋಳದರಾಶಿ ನನ್ನ ಸ್ವಂತ ಗ್ರಾಮ. ತಾತನ ಆಶಿರ್ವಾದ ಸದಾ ಭಕ್ತಾದಿಗಳ ಮೇಲೆ ಇರಲಿ ಎಂದು ಪ್ರಾರ್ಥಿಸಿದರು. ವರ್ಷದಿಂದ ವರ್ಷಕ್ಕೆ ದೇವಸ್ಥಾನ ಪ್ರಸಿದ್ಧಿ ಪಡೆಯುತ್ತಿದೆ. ಟ್ರಸ್ಟ್ ಕಮಿಟಿ, ದಾಸೋಹ ಸೇವಾ ಸಂಘ ದೇವಸ್ಥಾನದ ಅಭಿವೃದ್ಧಿಯಲ್ಲಿ ಸಾಕಷ್ಟು ಕೆಲಸವನ್ನು ಮಾಡಿದೆ ಎಂದು ಸಚಿವರು ಪ್ರಶಂಸಿಸಿದರು.
*****