ಹೊಸಪೇಟೆ ಸರಕಾರಿ ಪ್ರಥಮ‌ ದರ್ಜೆ ಕಾಲೇಜಿಗೆ ಎರಡು ರ್ಯಾಂಕ್: ಪ್ರಾಚಾರ್ಯ ಮತ್ತು ಅಧ್ಯಾಪಕರು‌ ಹರ್ಷ

ಹೊಸಪೇಟೆ, ಜೂ. 5: ಬಳ್ಳಾರಿಯ ವಿ.ಎಸ್.ಕೆ ವಿವಿ‌ ನಡೆಸಿದ 2021-22 ನೇ ಸಾಲಿನ‌ ಪದವಿ ಪರೀಕ್ಷೆಯಲ್ಲಿ ನಗರದ ಶ್ರೀ ಶಂಕರ್ ಆನಂದಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ಆಶಾ ಎಸ್ ಎರಡನೇ ರ್ಯಾಂಕ್ ಹಾಗೂ ವಿಜ್ಞಾನ ವಿಭಾಗದ ಮೇಘನಾ ಸಿ ಒಂಬತ್ತನೇ ರ್ಯಾಂಕ್ ಪಡೆದು ಕಾಲೇಜು‌ ಹಾಗೂ ನಗರಕ್ಕೆ ಕೀರ್ತಿ ತಂದಿದ್ದಾರೆ.
ನಗರದ ಹಿಂದುಳಿದ ಪ್ರದೇಶಗಳಾದ ಕಬ್ಬೇರ ಪೇಟೆ ಮತ್ತು ಚಪ್ಪರದಳ್ಳಿಯ ಕಡು ಬಡತನ ಕುಟುಂಬದ ಆಶಾ ಮತ್ತು ಮೇಘನಾ ಅವರ ಸಾಧನೆಗೆ ಕಾಲೇಜಿನ ಪ್ರಾಚಾರ್ಯ ಪ್ರೊ.‌ನಟರಾಜ ಪಾಟೀಲ್ ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು ಹರ್ಷ ವ್ಯಕ್ತಪಡಿಸಿದರು.


ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಅಭಿನಂದನಾ ಕಾರ್ಯಕ್ರಮದಲ್ಲಿ ಸಾಧಕರಾದ ಆಶಾ ಮತ್ತು ಮೇಘನಾ ಅವರಿಗೆ ಪ್ರಾಚಾರ್ಯ ಪ್ರೊ.‌ನಟರಾಜ ಪಾಟೀಲ್ ಅವರು ಡಿಕ್ಷನರಿ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಟೀಲರು, ಕಾಲೇಜಿನ ಆಡಳಿತ ಮಂಡಳಿಯ ಅದ್ಯಕ್ಷರೂ ಆಗಿರುವ ಸಚಿವ ಆನಂದಸಿಂಗ್ ಅವರೇ ಶೀಘ್ರದಲ್ಲಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಿದ್ದಾರೆ ಎಂದು ಹೇಳಿದರು.
ಕಾಲೇಜಿಗೆ ಎರಡು ವರ್ಷಗಳ ಬಳಿಕ ಮತ್ತೆರಡು ರ್ಯಾಂಕ್ ಬಂದಿರುವುದು ಹೆಮ್ಮೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪ್ರಥಮ ಬಾರಿ ರ್ಯಾಂಕ್ ತಂದು ಕೊಟ್ಟಿದ್ದರು. ಇದೀಗ ಕಲಾ ಮತ್ತು ವಿಜ್ಞಾನ ವಿಭಾಗಕ್ಕೂ ಆಶಾ, ಮೇಘನಾ ಗೌರವ ತಂದು ಕೊಟ್ಟಿದ್ದಾರೆ ಎಂದರು.


ಆಂಗ್ಲ‌ವಿಭಾಗದ ಮುಖ್ಯಸ್ಥ ಡಾ.‌ಟಿ ಎಚ್ ಬಸವರಾಜ್ ಅವರು ಮಾತನಾಡಿ, ಇಬ್ಬರೂ ಸಾಧಕ ವಿದ್ಯಾರ್ಥಿನಿಯರು ಬಡತನದಲ್ಲಿ ಅರಳಿದ ಪ್ರತಿಭಾವಂತರು. ಇವರ ಶ್ರಮದಿಂದ ಕಾಲೇಜಿಗೆ, ನಗರಕ್ಕೆ ಕೀರ್ತಿ ಬಂದಿದೆ ಎಂದು ಪ್ರಶಂಸಿಸಿದರು.
ತಮಗೆ ರ್ಯಾಂಕ್ ಬರಲು ಕಾಲೇಜಿನ ಅಧ್ಯಾಪಕರು, ಪ್ರಾಚಾರ್ಯರು, ಕುಟುಂಬದವರ ಪ್ರೋತ್ಸಾಹವೇ ಕಾರಣ ಎಂದು ಆಶಾ, ಮೇಘನಾ ಹೇಳಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಡಿ ಎಂ ಮಲ್ಲಿಕಾರ್ಜುನ, ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಟಿ. ಎಚ್ ಎಂ ದ್ವಾರುಕಸ್ವಾಮಿ ಮಾತನಾಡಿದರು.
ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ. ನಾಗಣ್ಣ ಕಿಲಾರಿ, ಪ್ರಾಧ್ಯಾಪಕರುಗಳಾದ ಗದಿಗೇಶ್, ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ಆಶಾ, ಮೇಘನಾ ಅವರ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
*****