ಅನುದಿನ ಕವನ-೫೨೨, ಕವಿ: ಡಾ.‌ಸದಾಶಿವ ದೊಡಮನಿ, ಇಳಕಲ್, ಕವನದ ಶೀರ್ಷಿಕೆ: ಕಾಗೆಗಳ ಸಂತತಿ ಸಾವಿರವಾಗಲಿ

ಕಾಗೆಗಳ ಸಂತತಿ ಸಾವಿರವಾಗಲಿ

ರೊಟ್ಟಿಯ ಕಥನಕೆ
ಕರಳಾಗಿ, ದನಿಯಾಗಿ
ಹೃದಯವಾಗಿ ಮಿಡಿದ ಕೆಲವೇ ಕೆಲವರ
ಕಾಗೆಯ ಸಂತತಿ-
ಯವರ ಋಣವ ಹೇಗೆ ತೀರಿಸಲಿ?
ಆ ಕಾಗೆಗಳ ಸಂತತಿ ಸಾವಿರವಾಗಲಿ!
ಹಂಚುವ ಕೈಗಳು ಸಾವಿರ, ಸಾವಿರವಾಗಲಿ!!

ರೊಟ್ಟಿಗೆ ಖೊಟ್ಟಿ ಮಾತಾಡಿ,
ನಿಸ್ಸಕರಳಿಗರಾಗಿ, ಮೂಗರಾಗಿ
ಹೃದಯ ವಿಹಿನರಾಗಿ
ಬಿಳಿ ಹಾಳೆಯಲಿ
ಕ್ರಿಯೆ-ಪ್ರತಿಕ್ರಿಯೆಗೆ ಹೃದಯ ಸ್ಥಳವೀಯದೇ
ಸರತಿಯ ಒಣ ಕಥೆ ಹೇಳುತ ಮುಂದೆ ಸಾಗ ಹಾಕಿ
ಬೆಳ್ಳಗೆ ನಕ್ಕು
ಮುಖವಾಡ ಕಳಚದವರ ಹೆಸರು
ಹೇಗೆ ಉಸರದಿರಲಿ?

ಉಸಿರು ಉಸಿರಾಡಲು
ರೊಟ್ಟಿ
ಉಸಿರು ಗಟ್ಟಿಯಾಗಲು
ತುಂಡು ರೊಟ್ಟಿ
ಬೇಕೇ ಬೇಕು!

ರೊಟ್ಟಿ ಎಂದರೆ
ಬುದ್ಧ-ಜಗತ್ತು!
ಪ್ರೀತಿ-ಕರುಣೆ
ಜೀವಗಳ ಜೀವ ಕಾಯುವ ತಾಯಿ!

ರೊಟ್ಟಿ ಅವ್ವ!
ರೊಟ್ಟಿ ಕಾವ್ಯ
ರೊಟ್ಟಿ ಇಲ್ಲದೆ ಊಹೆ
ನೆಲೆ ಸಿಗದ ಬಾನು!

-ಡಾ. ಸದಾಶಿವ ದೊಡಮನಿ, ಇಳಕಲ್ಲು
*****