“ಇದು ಕತ್ತರಿ-ಸೂಜಿಯ ಜುಗಲ್ಬಂದಿಯ ಕವಿತೆ. ಹರಿವ-ಹೊಲಿವ ಕ್ರಿಯೆ-ಪ್ರಕ್ರಿಯಗಳ ಆಂತರ್ಯದ ಭಾವಗೀತೆ. ಕತ್ತರಿಯ ಅಲಗಿನ ಮೇಲೆ ಹರಿದಾಡಿ, ಸೂಜಿಯ ಕಣ್ಣೊಳಗಿಳಿದು ನೋಡಿದರೆ ಅದೆಷ್ಟು ಅರ್ಥಗಳ ಹರವಿದೆ. ಅರಿವಿನ ಹರಿವಿದೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇
ಕತ್ತರಿ ಮತ್ತು ಸೂಜಿ..!
ಹೃದಯವಿಲ್ಲದ ಕತ್ತರಿ
ಕಣ್ಣಿಗೆ ಕಂಡ ಬಟ್ಟೆಯನೆಲ್ಲ
ಥಟ್ಟನೆ ಕತ್ತರಿಸಬಲ್ಲುದು.!
ಅರಿವೆಯ ಒಡಲಾಳದ
ಎಳೆ ಎಳೆಗಳನೆಲ್ಲ ಎಳೆದು
ಛಿದ್ರಿಸಿ ಹರಿಯಬಲ್ಲುದು.!
ನೂಲುಗಳ ನರಳಿಸುತ
ಕರುಣೆಯಿಲ್ಲದೆ ಬೇರ್ಪಡಿಸಿ
ಸಿಗಿದು ತುಂಡರಿಸಬಲ್ಲುದು.!
ಹೃದಯವಂತ ಸೂಜಿ
ಹರಿದ ಅರಿವೆ ಚೂರುಗಳನೆಲ್ಲ
ಮೆಲ್ಲನೆ ಬೆಸೆಯಬಲ್ಲುದು.!
ಎದೆಯ ತಂತುಗಳಿಂದ
ಬೇರಾದ ಬಟ್ಟೆ ತುಂಡುಗಳ
ಕೂಡಿಸಿ ಜೋಡಿಸಬಲ್ಲುದು.!
ನೂಲುಗಳ ನವಿರಾಗಿ ಅರಳಿಸುತ
ಒಟ್ಟಾಗಿಸಿ ಹೊಲಿಯಬಲ್ಲುದು.!
ಬಂಧ ಹೊಸೆಯಬಲ್ಲುದು.!
ಕತ್ತರಿಯ ಕಾಠಿಣ್ಯತೆಗಿಂತ
ಸೂಜಿಯ ಕಾರುಣ್ಯತೆ ಹಿರಿದು
ಕತ್ತರಿಯ ನಿರ್ಧಾಕ್ಷಿಣೆಗಿಂತ
ಸೂಜಿಯ ನೈಪುಣ್ಯತೆ ದೊಡ್ಡದು
ಜಗವುಳಿದು ಹೊಳೆದಿರುವುದು
ಉಡುಗೆ ತೊಡುಗೆ ಮಿನುಗಿರುವುದು
ಮನುಜನ ಮಾನ ಉಳಿದಿರುವುದು
ಬದುಕು ಬೆತ್ತಲಾಗದಿರುವುದು
ಸೂಜಿಯ ಸಹನೆ ಸೌಜನ್ಯದಿಂದ
ಸೂಜಿಯ ಆಸ್ಥೆ ಅಂತಃಕರಣದಿಂದ
ಕತ್ತರಿಯ ಕ್ರೌರ್ಯಕ್ಕೆ ಉತ್ತರವೇ
ಸೂಜಿಯ ಸ್ಥೈರ್ಯ ಔದಾರ್ಯ.!
ಕತ್ತರಿಯಾಗದಿರೋಣ ನಾವೆಂದು
ಜೀವ ಭಾವ ಬದುಕುಗಳ
ಅರಿವಿನ ದಾರದಿ ಬೆಸೆಯುವ
ಸೂಜಿಯಾಗೋಣ ಎಂದೆಂದು.!
-ಎ.ಎನ್.ರಮೇಶ್. ಗುಬ್ಬಿ.