ಪ್ರೇಮಗಂಬನಿ
ಓ ಕವಿಸಖನೇ…ನಿನ್ನ ಪದ ಪಂಕ್ತಿಗಳು
ನನ್ನೆದೆಗಿರಿದು ರಕ್ತಕಣ್ಣೀರೆ ಸುರಿಸುತಿವೆ !
ನಿನ್ನೊಡನೆ ಅದೆಷ್ಟು ಗಣ ಪ್ರಾಸ ಪ್ರತಿಮೆಗಳು?
ನನ್ನ ಭಾವಕ್ಕೆ ಇಗೋ ಸರಳ ರಗಳೆ ಒಪ್ಪಿಸಿಕೊ !
ನಾನಂದು ನೋವಿಂದ ಬಳಲಿದಾಗ
ನೀ ಸಿಹಿಮಾತಿನ ಮುಲಾಮು ಲೇಪಿಸಿದೆ !
ಬಾಹ್ಯ ಬೆದರಿಕೆಗೆ ಬಸವಳಿದಾಗ ಅಂದು
ನೀನೇ ಸಾಂತ್ವನದಿ ಧೈರ್ಯ ತುಂಬಿದೆ !
ನನ್ನ ಬಾಳಿನ ಪ್ರೇಮದೊರತೆ ಬತ್ತಿರಲು
ಓ ಸಖನೆ ! ಒಲವಿನಕ್ಕರೆಯ ಮಳೆಗರೆದೆ
ಅಭದ್ರತೆಯ ಕತ್ತಿ ನೆತ್ತಿಮೇಲೆ ತೂಗುತಿರಲು
ನಿನ್ನ ಭಕ್ತಿಯ ಕವಚವನು ತೊಡಿಸಿದೆ
ಎಲ್ಲವಿದ್ದೂ ಏನೂ ಇಲ್ಲದಂತಾಗಿರಲು ಮನಕೆ
ನೀನೆ ಅರಿವಿನ ಗುರುವಾಗಿ ಬಂದೆ !
ದಿಕ್ಕೆಟ್ಟು ಓಡುತಿಹ ಮನಸೆಂಬ ಕುದುರೆಯನು
ಹಿತವಾಗಿ ಮೈದಡವಿ ಬುದ್ದಿಯ ಕೈಗಿಟ್ಟುಕೊಟ್ಟೆ;
ಬಂಧುಗಳ ಬಿರುನುಡಿಗೆ ಬಂಧಿಯಾಗಿರಲೆನ್ನ
ನೀ ಸ್ನೇಹಸಿಂಚನದಿ ಮುಕ್ತಗೊಳಿಸಿದೆ
ದ್ವೇಷದ ಜ್ವಾಲೆಯಲ್ಲಿ ಬೆಂದಿರಲು ನಾನಂದು
ನೀ ಪ್ರೇಮಸಿಂಚನದಿ ಮುದಗೊಳಿಸಿದೆ !
ಪರಿಸ್ಥಿತಿಯ ಕೈಗೊಂಬೆಗೆ ಪರಿತಪಿಸುತಿರಲು
ತನುಮನದಿ ಸೇವೆಗೈದು ಸುಸ್ಥಿತಿಗೆ ತಂದೆ !
ದುರುಳರ ಕೊಳದಲ್ಲಿ ಹೂತಿರಲು ಎನ್ನ
ಪ್ರೇಮಗಂಬನಿಯ ಪನ್ನೀರಲಿ ತೊಳೆದೆ
ಬಿರುಗಾಳಿಗೆ ಸಿಲುಕಿದ ಈ ಹಾಯಿದೋಣಿ
ನಿನ್ನಡಿದಾವರೆಯ ಸ್ಪರ್ಷಕಿಂದು ಹಾಯಾಗಿದೆ
ಗೆಳೆಯ ! ನನಗಾಗಿ ನೀನು ‘ಆಳಾಗಿ ದುಡಿದೆ’
‘ಅರಸನಾಗಿ ಉಣ್ಣು’ವುದು ನಿನಗೇ ಬಿಟ್ಟದ್ದು !
-🖊ಎನ್ ಎಸ್ ದೇವರಮನಿ.
ಘೊಡಗೇರಿ, ಬೆಳಗಾವಿ-ಜಿಲ್ಲೆ
*****