ಅನುದಿನ ಕವನ-೫೩೪, ಕವಿ: ಅಪ್ಪಗೆರೆ ಡಿ ಟಿ ಲಂಕೇಶ್, ಬೆಂಗಳೂರು, ಕವನದ ಶೀರ್ಷಿಕೆ:ಬಯಲ ದೋಣಿ…

ಬಯಲ ದೋಣಿ…

ಮುಂಜಾವು                             ಎಳೆಬಿಸಿಲ ಹೊತ್ತಿಗೆ                     ಮುಖಕ್ಕೆ ನೀರಾಡಿಸಿ                           ಕರಾಪು ತೆಗೆದು                          ತಲೆಬಾಚಿ ಹೊರಟ.                         ಖಾಲಿ ಜೋಳಿಗೆಯ.                     ಜೋಗಿ ನಾನು.,

ನಾನು
ಬಯಲ ದೋಣಿ
ನೀರಿಲ್ಲದ ಹರಿವು
ಹುಟ್ಟಿಲ್ಲದ ಸಂಚಾರ
ಹಾದಿಯಿಲ್ಲ, ತಳವೂ ಇಲ್ಲ
ಕತ್ತಲು ಎದೆಯ
ಮುತ್ತುವವರೆಗಿನ ಪಯಣ

ಜೋಳಿಗೆಯ
ಮುಂದಿಡಿದು,
ಒಂದಿಡಿ ರಾಗಿ, ಅಕ್ಕಿ,
ರೂಪಾಯಿ ನಾಣ್ಯ ಬಿದ್ದರೆ
ಬದುಕು ತೀರುವುದಿಲ್ಲ..,
ಸುಮ್ಮನೇ ಬೇಡುವುದೂ ಇಲ್ಲ
ಪದವ ಹಾಡುತೀನಿ..,

ಬಯಲ ಕಡಲಿಗೆ
ದಡವೆಂಬುದಿಲ್ಲ, ಒಳಿತಾಯಿತು
ತಿರುಗಿದ ಹಾದಿಗಳೆಲ್ಲ
ಮತ್ತೆ ಮತ್ತೆ ಹೊಸದು.,
ಊರೂರು ಕುಡಿದ ನೀರು
ಒಂದಿಡಿ ಅನ್ನದ ಶಕುತಿ
ಜೀವ ಬದುಕಿತು

ನಾನು
ಬಯಲ ದೋಣಿ
ನೀರಿಲ್ಲದ ಹರಿವು
ಅನ್ನದ ಸಂಚಾರ,
ನೆಲೆಯಿಲ್ಲ, ನಿಲ್ಲುವುದೂ ಇಲ್ಲ.,
ಎದೆಯ ಜೋಗಪ್ಪ
ಪದವ ನಿಲ್ಲಿಸೋ ತನಕ..,

-ಅಪ್ಪಗೆರೆ ಡಿ ಟಿ ಲಂಕೇಶ್, ಬೆಂಗಳೂರು
*****