ಎಷ್ಟು ಹಿತವಾಗಿತ್ತು
ಎಷ್ಟು ಹಿತವಾಗಿತ್ತು ನಿನ್ನ ಪಿಸುಮಾತು
ಏನದರ ರೀತಿ! ಏನದರ ಮತ್ತು!
ಕಣ್ಣಲ್ಲಿ ಕಣ್ಣಿಟ್ಟು ಹೇಳು ಓ ಗೆಳತಿ
ಈಗೆಲ್ಲಿ ಹೋಯಿತು ಆ ನಿನ್ನ ಪ್ರೀತಿ?
ಒಂದೆ ಹೊದಿಕೆಯ ಒಳಗೆ ಇಬ್ಬರೂ ಒಟ್ಟು
ಮೈಯೆಲ್ಲ ಕಿವಿಯಾಗಿ ಆಲಿಸಿದ ಗುಟ್ಟು
ತುಟಿಗೆ ತುಟಿ ಬೆಸೆದು ನೀನಂದು ಉಲಿದ
ಒಂದೊಂದು ಮಾತೂ, ಮಾತಲ್ಲ ವೇದ!
ಮುಂಜಾನೆ ಎಬ್ಬಿಸಿ ಜೇನು ದನಿಯಲ್ಲಿ
ನಿದ್ದೆ ಬಂತೆ ರಾತ್ರಿ? ಎಂದು ನಗೆ ಚೆಲ್ಲಿ
ಬಿಸಿ ಕಾಫಿ ತಂದಿಟ್ಟು ಗಲ್ಲ ನೇವರಿಸಿದೆ
ಈಗಲ್ಲ ಹಲ್ಲುಜ್ಜಿ ಎಂದು ಗದರಿಸಿದೆ
ಮರೆತುಹೋಯಿತೆ ಎಲ್ಲವೂ ಈಗ?
ಏಕೆ ಹಾಕಿರುವೆ ತುಟಿಗಳಿಗೆ ಬೀಗ?
ಕಣ್ಣಲ್ಲಿ ಕಣ್ಣಿಟ್ಟು ಹೇಳು ಓ ಗೆಳತಿ
ಎಲ್ಲಿ ಮರೆಯಾಯಿತು ಆ ನಿನ್ನ ಪ್ರೀತಿ?
-ಎಚ್.ಡುಂಡಿರಾಜ್, ಬೆಂಗಳೂರು
*****