ರುಧಿರ ಮುಖ ಲೇ:ಸಿದ್ಧರಾಮ‌ ಕೂಡ್ಲಿಗಿ

  • ರುಧಿರ ಮುಖ
  • ಮೊನ್ನೆ ಪ್ರಥಮ ಪಿಯುಸಿ ತರಗತಿ ತೆಗೆದುಕೊಂಡಿದ್ದೆ. ’ದುರ್ಯೋಧನ ವಿಲಾಪ’ ಪದ್ಯಭಾಗ. ಅದಕ್ಕೂ ಮುನ್ನ ಮಕ್ಕಳಿಗೆ ಮಹಾಭಾರತ ಯುದ್ಧದ ಕೊನೆಯ ದಿನದ ಭಾಗವನ್ನು ಸಂಕ್ಷಿಪ್ತವಾಗಿ ತಿಳಿಸಿದ್ದೆ. ಭೀಮ ದುರ್ಯೋಧನರ ಕಾಳಗದ ಸನ್ನಿವೇಶವನ್ನೂ ವರ್ಣಿಸಿದ್ದೆ.
    ಕತೆಯನ್ನೆಲ್ಲ ಕೇಳಿದ ನಂತರ ವಿದ್ಯಾರ್ಥಿನಿಯೊಬ್ಬಳು ಎದ್ದು ನಿಂತು ’ಸರ್ ಭೀಮನ ಗದೆಯ ಹೆಸರೇನು ? ” ಎಂದು ಕೇಳಿದಳು. ಇದು ನನಗೆ ಅನಿರೀಕ್ಷಿತ ಪ್ರಶ್ನೆ.

    ಸಾಮಾನ್ಯವಾಗಿ ತರಗತಿಗಳಲ್ಲಿ ಸಮಯ, ಸನ್ನಿವೇಶ, ಸಂದರ್ಭಗಳು ಹೇಗೆ ಎದುರಾಗುತ್ತವೆ ಅನ್ನೋದು ಗೊತ್ತಿರುವುದಿಲ್ಲ. ಇಷ್ಟು ವರ್ಷಗಳ ಅನುಭವದಲ್ಲಿ ತರಗತಿಯನ್ನು ನಮ್ಮ ನಿಯಂತ್ರಣಕ್ಕೆ ಹೇಗೆ ತೆಗೆದುಕೊಳ್ಳಬೇಕೆಂದು ಅನುಭವವಾಗಿದೆ. ಪ್ರತಿ ತರಗತಿಯ ಕೊನೆಗೆ ಮಕ್ಕಳಿಂದ ಪ್ರಶ್ನೆಗಳನ್ನೂ ನಿರೀಕ್ಷಿಸಿ, ಅವರ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ಇದು ನನಗೆ ಹಲವಾರು ವರ್ಷಗಳಿಂದ ರೂಢಿ. ಆದರೆ ಕೆಲವೊಮ್ಮೆ ಮಕ್ಕಳಿಂದ ಎಂಥ ಪ್ರಶ್ನೆಗಳು ಬರುತ್ತವೆಂದರೆ ನಾವೂ ಸಹ ಹುಡುಕಾಡುವಷ್ಟು. ಅದಕ್ಕೇ ಶಿಕ್ಷಕರಾಗಿರುವ ನಾವು ಯಾವಾಗಲೂ ವಿದ್ಯಾರ್ಥಿಗಳೇ ಅಂತ ಹೇಳುವುದು. ಖಂಡಿತ ನಾವು ಪರಿಪೂರ್ಣರಲ್ಲ.

    ವಿದ್ಯಾರ್ಥಿನಿಯ ಪ್ರಶ್ನೆ ನನ್ನನ್ನು ಕಾಡಿತು. ಹೌದಲ್ಲ ನಾನು ಇದರ ಬಗ್ಗೆ ಯೋಚಿಸಿರಲಿಲ್ಲ ಎಂದುಕೊಂಡು ’ನನಗೂ ಗೊತ್ತಿಲ್ಲ ತಿಳಿದುಕೊಂಡು ಬಂದು ನಾಳೆ ಹೇಳುತ್ತೇನೆ ’ ಎಂದೆ. ಯಾಕೆಂದರೆ ಮಕ್ಕಳ ಎದುರು ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಎಂದೂ ಸುಳ್ಳನ್ನು ಹೇಳುವುದಾಗಲಿ ಗದರಿಸಿ ಕೂಡಿಸುವುದಾಗಲಿ ಮಾಡಿಲ್ಲ. ಗೊತ್ತಿಲ್ಲದಿದ್ದರೆ ಪ್ರಾಮಾಣಿಕವಾಗಿಯೇ ಮಕ್ಕಳೆದುರು ಗೊತ್ತಿಲ್ಲ ನೋಡಿಕೊಂಡು ಬಂದು ಹೇಳುತ್ತೇನೆ ಎಂದೇ ಹೇಳಿದ್ದೇನೆ. ಮತ್ತು ಹಾಗೆ ಹೇಳಿದ ಮೇಲೆ ಮಕ್ಕಳು ಮರೆತರೂ ನಾನು ಮರೆಯದೇ ಪ್ರಶ್ನೆಗೆ ಹುಡುಕಾಡಿ ಉತ್ತರವನ್ನು ಮರುದಿನ ಹೇಳಿದ್ದೇನೆ.

    ಇನ್ನು ಭೀಮನ ಗದೆಯ ಹೆಸರನ್ನು ಹುಡುಕುವ ಕೆಲಸ. ಪುರಾಣ ಭಾರತ ಕೋಶವನ್ನೆಲ್ಲ ತಡಕಾಡಿದೆ. ಇತರೆ ಪುಸ್ತಕಗಳನ್ನು ಹುಡುಕಿದೆ ಸಿಗಲಿಲ್ಲ. ತಲೆಯಲ್ಲಿ ಅದೇ ಪ್ರಶ್ನೆ ಕೊರೆಯುತ್ತಿತ್ತು. ಅಂತರ್ಜಾಲದಲ್ಲೂ ಹುಡುಕಿದೆ ಅಲ್ಲೂ ಸಿಗಲಿಲ್ಲ. ಬೇರೆ ಬೇರೆ ವಿಧವಾಗಿ ಅಂತರ್ಜಾಲದಲ್ಲಿ ಹುಡುಕಿದ ನಂತರ ಒಂದೆಡೆ ಭೀಮನ ಗದೆಯ ಹೆಸರಿನ ಪ್ರಸ್ತಾಪವಿತ್ತು. ಅದರ ಹೆಸರು ’ರುಧಿರ ಮುಖ’. ರುಧಿರ ಎಂದರೆ ರಕ್ತ ಮತ್ತು ಕೆಂಪುಬಣ್ಣ ಎಂಬರ್ಥವಿದೆ. ಭೀಮನ ಗದೆಗೆ ಸೂಕ್ತವಾದ ಹೆಸರೇ ಅದು. “ರಕ್ತದ ಮುಖವನ್ನು ಹೊಂದಿದ ಗದೆ” ಎಂಬರ್ಥ. ಆಗ ನನಗೆ ಸಮಧಾನವೆನಿಸಿತು. ಒಂದು ವಿಷಯವನ್ನು ತಿಳಿದ ತೃಪ್ತಿಯೂ ನನಗಿತ್ತು.

    ಮರುದಿನ ತರಗತಿಗೆ ಹೋಗಿ ವಿದ್ಯಾರ್ಥಿಗೆ ಹೇಳಿದೆ. ’ಭೀಮನ ಗದೆಯ ಹೆಸರು ರುಧಿರ ಮುಖ ಅಂದರೆ ರಕ್ತದ ಮುಖವುಳ್ಳ ಗದೆ’ ಎಂದೆ. ವಿದ್ಯಾರ್ಥಿನಿಗೆ ಉತ್ತರ ದೊರೆತ ಸಂತೋಷ ಅವಳ ಮುಖದಲ್ಲಿ ಕಂಡಿತು. ನನಗೂ ಸಂತೋಷವಾಯಿತು. ಒಂದು ವಿಷಯ ತಿಳಿದುಕೊಳ್ಳಲು ಆ ವಿದ್ಯಾರ್ಥಿನಿ ನನಗೆ ಪರೋಕ್ಷವಾಗಿ ಕಾರಣಳಾಗಿದ್ದಳು.
  • -ಸಿದ್ಧರಾಮ ಕೂಡ್ಲಿಗಿ

  • (ಭೀಮನ ಚಿತ್ರ: ಅಂತರ್ಜಾಲ)