ಮುನಿದೆಯಾ ಧಾರುಣಿ
ನಿನ್ನ ಮಕ್ಕಳ ಮೇಲೆ
ನಿನ್ನದೇ ಸೃಷ್ಟಿಯಲ್ಲವೇ ನಾವು
ಪಾಲಿಸಬೇಕಲ್ಲವೇ ನಮ್ಮನು
ನಿರುಕಿಸಿದೆವು ನಿನ್ನಲಿ ನಾವು
ಮಾತೆಯ ಮಮತೆಯನು
ಭಾವ ತುಂಬಿದ ಪ್ರೀತಿಯನು
ಮತ್ತೆ ಏಕಿದೀ ರೌದ್ರಭಾವ
ನೀಡಿದೆಯಲ್ಲವೇ ನಮ್ಮ ಪಾಲನೆಗೆ
ಹಣ್ಣು ಹಂಪಲಗಳನು
ಉದರ ಭರಿಸುವ ಅನ್ನವನು
ಉಸಿರಾಡುವ ವಾಯುವನು
ಹಕ್ಕಿ ಪಕ್ಕಿಗಳ ಸೃಷ್ಟಿಸಿದ ನೀನು
ಕರುಣಿಸಿದೆ ಮಧುರ ಕಂಠವ
ಮುಂಜಾನೆಯ ಮಧುರ ನಾದವ
ಮುದಗೊಳಿಸಲು ನಮ್ಮ ಮನ
ನಿತ್ಯ ಹರಿದ್ವರ್ಣದ ಕಾಡಿನಲಿ
ನಲಿದಿಲ್ಲವೇ ಖಗ ಮೃಗಗಳು
ಬೆಳೆದಿತ್ತಲ್ಲವೇ ಎತ್ತರೆತ್ತರ ವೃಕ್ಷಗಳು
ದಣಿದ ದೇಹಕೆ ನೀಡುತ ತಂಪು
ಏನಾಯಿತೀಗ ಬದಲಾಯಿತೇ
ಘಾಸಿಗೊಂಡಿತೇ ನಿನ್ನ ಮನ
ಕೋಪಗೊಂಡೆಯಾ ನಿನ್ನ ಮಕ್ಕಳ ಮೇಲೆ
ನಾವು ಮಾಡಿದ ತಪ್ಪಿಗೆ
ನಿಜ ಇಟ್ಟೆವು ಕೊಡಲಿಯ
ವೃಕ್ಷರಾಜಿಯ ಮೇಲೆ
ಸ್ವಾರ್ಥದಾಸೆಗೆ ಬಿದ್ದು ಕಲುಕಿದೆವು
ನಿನ್ನ ಮಮತೆಯ ಕೊಳದ ಸಲಿಲವನು
ನೀ ಕರುಣಿಸಿದ ಉಸಿರಿಗೆ
ಬೆರೆಸಿದೆವು ಮಾಲಿನ್ಯದ ವಿಷ
ಹರಡಿದೆವು ದ್ವೇಷಾಸೂಯೆಗಳ
ಮರೆತು ನೀ ಉಣಿಸಿದ ಪ್ರೀತಿಯ
ಜಾತಿ ಧರ್ಮದ ನೆಪದಲಿ
ತ್ಯಜಿಸಿದೆವು ಸಂಘತ್ವದ ತತ್ವವನು
ಮರೆತೆವು ದೀಪದಿಂದ ದೀಪ ಹಚ್ಚುತ
ಮಾನವತೆಯ ಪ್ರಜ್ವಲಿಸಲು
ನೋಡೀಗ ನಿನ್ನ ಮಕ್ಕಳ ಗೋಳನು
ಮಳೆಯ ಮುಸಲ ಧಾರೆಯೊಮ್ಮೆ
ಉರಿಬಿಸಿಲ ಬೇಗೆ ಇನ್ನೊಮ್ಮೆ
ರೋಗ ರುಜಿನಗಳಿಂದ ಸಾವು ಮಗುದೊಮ್ಮೆ
ತಾಳಿದೆಯಾ ರೌದ್ರರೂಪವ
ನೋಡಿ ಮನುಜನ ದೌರ್ಜನ್ಯವ
ಆದೆಯಾ ನೀ ದುರ್ಗೆ, ಕೊಲ್ಲ ಬಯಸಿದೆಯಾ
ಮುನಿದು ನಿನ್ನ ಮಕ್ಕಳ ಪಾಪಕೆ
ನೋಡು ಧಾರುಣಿ ನಿಲ್ಲದ
ಮನುಜರ ಮಾರಣ ಹೋಮ
ಮುಗುದರ ನಿಲ್ಲದ ವಿನಾಶ
ಯಾರ ತಪ್ಪಿಗೆ ಯಾರಿಗೆ ಶಿಕ್ಷೆ?
ಮುಗ್ದರಿಲ್ಲವೇ ಧರೆಯಲ್ಲಿ
ಪಾಪವರಿಯದ ನಿನ್ನ ಮಕ್ಕಳಿವು
ತಡೆಯಲಾರೆವು ನಾವು ದುಷ್ಟತನದ ನಾಶವ
ಉಳಿಸಲಾರೆಯಾ ನಿನ್ನ ಪ್ರೀತಿಸುವ ಮಕ್ಕಳ
ಮನ್ನಿಸು ತಾಯೆ ನಾವು ಮಾಡುವ
ತಪ್ಪುಗಳ ಸರಮಾಲೆಯಾ
ಉಳಿಸು ನೀನೇ ಸೃಷ್ಟಿಸಿದ ಮನುಕುಲವ
ತರಲಾಗದೇ ಅಂದಿನ ನಿಸರ್ಗ ವೈಭವವ
ಕಾಲ ಮನ್ನಿಸು ಅಮ್ಮ
-ಅರುಣಕುಮಾರ್ ಹಬ್ಬು, ಹುಬ್ಬಳ್ಳಿ
*****