ಶಿಕ್ಷಕರು ಒಂದು ಅವಲೋಕನ -ಸಿದ್ಧರಾಮ ಕೂಡ್ಲಿಗಿ

ಶಿಕ್ಷಕರು ಎಂದರೆ ಹೀಗೇ ಇರಬೇಕು ಎಂದು ಸಮಾಜ ನೋಡುತ್ತಲೇ ಇರುತ್ತದೆ. ಯಾವ ಇಲಾಖೆಯನ್ನೂ ಗಮನಿಸದಷ್ಟು ಸಮಾಜ ಶಿಕ್ಷಕರನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಪ್ರತಿಯೊಂದು ನಡೆಯನ್ನೂ ಗಮನಿಸಿ ಇವರೆಲ್ಲ ಹೀಗೇ ಎಂದು ನಿರ್ಣಯಿಸಿಬಿಡುತ್ತದೆ.

ನಾನೇ ಗಮನಿಸಿದಂತೆ ಕೆಲವು ಶಿಕ್ಷಕರು ಶಿಫಾರಸಿನಿಂದಲೋ, ಹಣದಿಂದಲೋ, ಏನೇನೋ ಆಗಿ ಶಿಕ್ಷಕ ವೃತ್ತಿಗೆ ಬರುತ್ತಾರೆ. ಕೆಲವರು ನಿಜವಾಗಿಯೂ ಶ್ರೀಮಂತರೇ ಆಗಿರುತ್ತಾರೆ. ಆದರೆ ಅವರಿಗೆ ಹೇಳಿಕೊಳ್ಳಲು ಒಂದು ಹುದ್ದೆ ಬೇಕಾಗಿರುತ್ತದೆ ಅಷ್ಟೆ. ಇಂಥವರಿಂದಲೇ ಅವನತಿ ಪ್ರಾರಂಭವಾಗಿಡುತ್ತದೆ.

ಬಹುತೇಕ ಶಿಕ್ಷಕರಲ್ಲಿ ಮಕ್ಕಳಿಗೆ ಕಲಿಸಬೇಕೆಂಬ ಶ್ರದ್ಧೆಯಾಗಲಿ, ನಾನೂ ಓದಬೇಕೆಂಬ ಹಂಬಲವಾಗಲಿ, ನನ್ನ ಕರ್ತವ್ಯವೇನೆಂಬ ಜವಾಬ್ದಾರಿಗಳಾಗಲೀ ಇರುವುದಿಲ್ಲ. ಶ್ರೀಮಂತರಾಗಿರುವ ಕೆಲವರಿಗೆ ಶಿಕ್ಷಕ ಹುದ್ದೆ ಒಂದು ’ಹೆಸರಿಗಿರಲಿ’ ಎನ್ನುವುದಾಗಿರುತ್ತದೆ, ಕೆಲವರಿಗೆ ಸಮಾಜದಲ್ಲಿ ’ನಾನೊಬ್ಬ ಶಿಕ್ಷಕ’ ಎಂದು ಹೇಳಿಕೊಳ್ಳುವುದಕ್ಕಾಗಿ, ಕೆಲವರಿಗೆ ಒಂದು ’ಸ್ಟೇಟಸ್’ ಆಗಿರುತ್ತದೆ. ಕೆಲವರು ಹೊಲ, ಗದ್ದೆ, ತೋಟಗಳನ್ನು ಹೊಂದಿದ್ದು ’ಇದೊಂದಿರಲಿ’ ಎಂಬ ಮನೋಭಾವದವರಾಗಿರುತ್ತಾರೆ.

ಕೆಲವರಿಗೆ ರಾಜಕೀಯವೆಂದರೆ ಅತ್ಯಂತ ಪ್ರೀತಿ. ಇದು ವ್ಯವಸ್ಥೆಯ ಭಾಗವಾಗಿದೆಯೋ, ಅಥವಾ ಹೀಗೆ ಬೆಳೆಯುತ್ತಿದೆಯೋ ಗೊತ್ತಿಲ್ಲ. ರಾಜಕೀಯ ನಾಯಕರ ಹಿಂದೆ ಅಲೆಯುವುದೇ ಇವರ ಕೆಲಸ. ಎಷ್ಟೆಷ್ಟು ರಾಜಕೀಯ ವ್ಯಕ್ತಿಗಳು ಗೊತ್ತಿರುತ್ತಾರೋ ಅಥವಾ ಆತ್ಮೀಯರಾಗಿರುತ್ತಾರೋ ಅಷ್ಟಷ್ಟೇ ಈ ಶಿಕ್ಷಕರ ’ಮರ್ಯಾದೆ, ಗೌರವ, ಪ್ರತಿಷ್ಠೆ’ ಏರುತ್ತಾ ಹೋಗುತ್ತದೆ. ಇಂಥವರನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ಇವರು ಏನು ಬೇಕಾದರೂ ಮಾಡೀ ದಕ್ಕಿಸಿಕೊಳ್ಳಬಲ್ಲರು. ಇಷ್ಟೇ ಅಲ್ಲ ಸಂಘ ಸಂಸ್ಥೆಗಳ ಹುದ್ದೆಗೇರಲೂ ಇವೆಲ್ಲ ಮೆಟ್ಟಿಲುಗಳಾಗಿರುತ್ತವೆ. ದಿನದ ಬಹುತೇಕ ಭಾಗ ರಾಜಕೀಯ ಮಾಡುತ್ತ ಅಥವಾ ರಾಜಕೀಯ ವ್ಯಕ್ತಿಗಳ ಹಿಂದೆ ಸುತ್ತುವುದೇ ಇವರ ಕೆಲಸವಾಗಿರುತ್ತದೆ. ಇಲಾಖೆಯ ಅಧಿಕಾರಿಗಳೂ ಏನೂ ಮಾಡಲಾಗದ ದುಸ್ಥಿತಿ ಇರುತ್ತದೆ. ಇವರೆಲ್ಲ ಇಲಾಖೆಗೆ ಅರ್ಜಿ ಸಲ್ಲಿಸಿ ಶಿಫಾರಸು ಮಾಡಿಸಿ ’ಆದರ್ಶ ಶಿಕ್ಷಕರು’, ’ಮಾದರಿ ಶಿಕ್ಷಕರು’, ಮುತ್ತು, ರತ್ನ, ವಜ್ರಗಳೆಂಬ ಪ್ರಶಸ್ತಿ, ಸನ್ಮಾನಗಳನ್ನೂ ಮಾಡಿಸಿಕೊಳ್ಳುತ್ತಾರೆ.

ಕೆಲ ಅತ್ಯುತ್ತಮ ಶಿಕ್ಷಕರು ಮಾತ್ರ ಇದಕ್ಕೆ ಅರ್ಹರಾಗಿರುತ್ತಾರೆ. ಆದರೆ ಅಂಥವರು ಇವಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದೂ ಇಲ್ಲ ಮತ್ತು ಅಂಥವರಿಗೆ ಯಾವ ಪ್ರಶಸ್ತಿಗಳೂ ಸಿಗುವುದಿಲ್ಲ. ಅಂಥವರು ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುತ್ತಾರೆ.

ಇನ್ನು ಕೆಲವರು ಅಧಿಕಾರಿ ವರ್ಗ, ಕಚೇರಿಯವರನ್ನು ಸರಿಯಾಗಿ ನೋಡಿಕೊಳ್ಳಲೆಂದೇ ಇರುತ್ತಾರೆ. ಯಾವುದೋ ನೆಪದಲ್ಲಿ ಕಾರ್ಯಕ್ರಮಗಳನ್ನು ನಡೆಸಿ ’ಔತಣಕೂಟ’ ಏರ್ಪಡಿಸುವುದು ಇವರ ಕೆಲಸವಾಗಿರುತ್ತದೆ. ಎಷ್ಟೆಷ್ಟು ಹೆಚ್ಚು ಅಧಿಕಾರಿಗಳನ್ನು, ಕಚೇರಿಯವರನ್ನು ಕರೆಯುವರೋ ಆ ಶಿಕ್ಷಕರ ’ಪ್ರತಿಷ್ಠೆ’ಹೆಚ್ಚಿರುತ್ತದೆ.

ಇವುಗಳ ನಡುವೆಯೂ ಪ್ರಾಮಾಣಿಕವಾಗಿ, ಶ್ರದ್ಧೆಯಿಂದ, ಯಾವುದೇ ನಿರೀಕ್ಷೆ, ಆಸೆಗಳಿಲ್ಲದೆ ಅತ್ಯಂತ ನಿಸ್ಪೃಹ ಸೇವೆ ಸಲ್ಲಿಸುವ ಅತ್ಯುತ್ತಮ ಶಿಕ್ಷಕರೂ ಇದ್ದಾರೆ. ದುರಂತವೆಂದರೆ ಇಲಾಖೆ ಅಂಥವರನ್ನು ತಾವಾಗಿಯೇ ಗುರುತಿಸುವುದೇ ಇಲ್ಲ. ಇಂಥ ಶಿಕ್ಷಕರು ಅವನ್ನೆಲ್ಲ ನಿರೀಕ್ಷಿಸುವುದೂ ಇಲ್ಲ. ಬಡತನದಲ್ಲಿಯೇ ಬೆಂದು, ನೊಂದು, ಶಿಕ್ಷಕ ವೃತ್ತಿಗೆ ಒಂದು ಘನತೆ, ಗೌರವ, ಪ್ರತಿಷ್ಠೆ, ಇಂಥವರಿರಬೇಕು ಎನ್ನುವ ರೀತಿಯ ಶಿಕ್ಷಕರೂ ಇದ್ದಾರೆ.

ದು:ಖದ ಸಂಗತಿಯೇನೆಂದರೆ ಎಲೆಯಮರೆಯ ಕಾಯಿಯಂತೆ ನಿಜವಾದ ಅತ್ಯುತ್ತಮ ಶಿಕ್ಷಕರು ಕೆಲಸ ಮಾಡುತ್ತಿದ್ದರೆ, ರಾಜಕೀಯ ಮಾಡುತ್ತ ಓಡಾಡುವ ’ಅತ್ಯುತ್ತಮ ಶಿಕ್ಷಕ’ ಎಂಬ ಸನ್ಮಾನ ಮಾಡಿಸಿಕೊಳ್ಳುವವರೇ ಹೆಚ್ಚು. ಇವೆಲ್ಲ ಕಣ್ಣೆದುರೇ ನಡೆಯುವ ವಿದ್ಯಾಮಾನಗಳು.

ಹೀಗಾಗಿಯೇ ಬಹುತೇಕ ಜನರ ಕಣ್ಣಿಗೆ ಶಿಕ್ಷಕರೆಂದರೆ ಸಂಬಳ ಪಡೆಯುವ ರಜೆಯ ಮಜಾ ಅನುಭವಿಸುವವರಾಗಿಯೇ ಕಾಣುತ್ತಾರೆ. ’ನಿಮಗೇನ್ ಸಾರ್ ಸಿಕ್ಕಾಪಟ್ಟೆ ಸಂಬಳ, ಸಿಕ್ಕಾಪಟ್ಟೆ ರಜೆ’ ಎನ್ನುವವರೇ ಹೆಚ್ಚು. ಇನ್ನು ಮೇಲೆ ಹೇಳಿದ ಶಿಕ್ಷಕರಿಂದ ಮಕ್ಕಳು ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ. ನಾಳಿನ ನಾಗರಿಕರನ್ನು ಹೇಗೆ ತಾನೆ ನಿರ್ಮಿಸಲು ಸಾಧ್ಯ. ಉತ್ತಮ ಸಮಾಜವನ್ನು ಹೇಗೆ ತಾನೆ ನಿರ್ಮಿಸಲು ಸಾಧ್ಯ.

-ಸಿದ್ಧರಾಮ ಕೂಡ್ಲಿಗಿ
*****