ಸುಮ್ಮನಿರದ ಕವಿತೆ
ನಾನೂ ಮೌನವಾಗಿರಬೇಕೆಂದಿದ್ದೇನೆ
ಸುಮ್ಮನಿರದೆ, ಮಾತಿನ ಯುದ್ಧಕೆಳೆಯುತಿದೆ ಈ ಲೋಕ…
ಶಾಂತಿನಿವಾಸದ ಕನಸ ಕನವರಿಕೆಯಲಿರುವಾಗ
ಬಂದೂಕು ಬಾಯಿತೆರೆದು, ಬಾಂಬ್ ಸಿಡಿದು ಕನಸ ಛಿದ್ರವಾಗುವುದ ಕಂಡು
ಏನೊ ತಳಮಳ, ಎಂಥದೊ ಕಳವಳ….
ನೆಲಕ್ಕೆ ಬಿದ್ದ ಬೀಜ ಮೊಳಕೆಯೊಡೆವಾಗ
ಶಾಂತಿಮಂತ್ರದ ಪಠಣ.
ಮನದೊಳಗೆ ಕ್ಷಣ ನಿರಾಳ.
ಬೀಜದ ಬದುಕು ನುಂಗಲು ಹಸಿದಿರುವ ಮನಸುಗಳ ಕಂಡು
ಮತ್ತದೆ, ಹಳವಂಡಗಳ ಯಾಣ…
ನಸುಹೊತ್ತು ಹೂ ಬಿರಿವಾಗ
ಸುತ್ತೆಲ್ಲ ಶಾಂತ, ಪ್ರಸನ್ನ, ಪರಿಮಳ.
ಹಕ್ಕಿಗಳ ಇಂಚರ, ದುಂಬಿಗಳ ಝೇಂಕಾರ,
ಹೊತ್ತು ಹೊರಡುವ ಮುನ್ನ ಹುಟ್ಟಿದ ಹೂವ ಹೊಸಕಿಹಾಕುವ ಹುನ್ನಾರ ಕಂಡು
ಮತ್ತದೆ, ಚಿತ್ತವಿಕಾರ…
ತೊಟ್ಟಿಲಲಿ ಮಗು ಮಲಗಿದಾಗ
ತಾಯ ಜೋಗುಳದ ಇಂಪಿಗೆ ಜೋಂಪು
ಕಂದನ ಕಣ್ಣಬಟ್ಟಲುಗಳಲಿ ಕನಸುಗಳ ಕುಣಿತ
ಎಚ್ಚರಗೊಂಡ ಮಗು ನಿಚ್ಚಳಾಗಿ ಕಣ್ಣುಮಿಟುಕಿಸಿ, ಜಗದಿಟ್ಟಿಸಿ ಕಿರಿಕಿರಿ ಮಾಡುವುದ ಕಂಡು
ಮತ್ತದೇ, ಕನಸುಗಳ ಕುಸಿತ…
ನೆಳಲ ತಂಪಲಿ ತಣ್ಣಗಿರುವಾಗ
ತಂಗಾಳಿ ಹಿತವೆನಿಸಿ, ಬಾಳು ಹಗುರ.
ಬಿಸಿಲ ಬೆಂಕಿಗಾಹುತಿ ನೆಲದೊಡಲು, ಆಳದ ಬೇರಿಗೆ ಗೆದ್ದಿಲು.
ಬಯಕೆಗಳ ಬಸಿರಿಗೆ ಭೂಗರ್ಭವೇ ಬಸಿದು ನಿಟ್ಟುಸಿರಿಡುವುದ ಕಂಡು
ಮತ್ತದೇ, ಕಾಣದ ಹುದುಲು….
ಸಮಾಧಿಗಳಲ್ಲೂ ಶವಗಳ ಪಿಸುಗುಡುವ ಸದ್ದು…!
ಕೇಳಬೇಕೆನಿಸುತ್ತದೆ ಸುಮ್ಮನಿದ್ದು.
ಈ ದಿವ್ಯಮೌನ ಕಂಡು ಅಲ್ಲಮ ಅಲ್ಲಗಳೆಯುತ್ತಾನೆ,
ಅಕ್ಕ ನಕ್ಕುಬಿಡುತ್ತಾಳೆ, ಅಣ್ಣ ಅಣಕವಾಡುತ್ತಾನೆ,
ಸೂಫಿ-ಸಂತ ಶರಣ ಸಂಕುಲ ಸಂಕಟ ಪಡುತ್ತದೆ.
ಹೊರಗೆ ಕಂಡದ್ದಕ್ಕೆ ಒಳಗೆ ಶೋಧ,
ಒಳಗೆ ಕಂಡದ್ದಕ್ಕೆ ಹೊರಗೆ ವೇದನೆ,
ಒಳ-ಹೊರ ದ್ವಂದ್ವಕ್ಕೆ ಧ್ಯಾನಸ್ಥ.
ಮೌನವೂ ಮಾತಿನ ಸೆರಗ ಹಿಡಿದು ನಡೆಯುವುದ ಕಂಡು
ಸುಮ್ಮನಿರದೆ ಕವಿತೆ ಹುಟ್ಟುತ್ತದೆ,
ಸುಮ್ಮನಿರದೆ ಕವಿತೆ ಹುಟ್ಟುತ್ತದೆ.
-ಡಾ. ಸಂಗಮೇಶ ಎಸ್. ಗಣಿ,
ಮುಖ್ಯಸ್ಥರು: ಕನ್ನಡ ವಿಭಾಗ,
ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ಕಾಲೇಜು, ಹೊಸಪೇಟೆ-೫೮೩೨೦೧
ವಿಜಯನಗರ ಜಿಲ್ಲೆ.
*****