ಅನುದಿನ‌ ಕವನ-೫೬೪, ಕವಿ: ಎ.ಎನ್.ರಮೇಶ್ ಗುಬ್ಬಿ., ಕವನದ ಶೀರ್ಷಿಕೆ: ನಿತ್ಯಸತ್ಯ ವಾಸ್ತವ!

“ಇದು ಪ್ರಶಸ್ತಿ ಪುರಸ್ಕಾರಗಳೆಂಬ ಭ್ರಮೆ ಕಳಚಿ ವಾಸ್ತವ ಬಿಚ್ಚಿಡುವ ಕವಿತೆ. ಸಾಧನೆಯ ಹಾದಿಗೆ ಸ್ಫೂರ್ತಿಯಾಗುವ ಬೆಳಕಿನ ಭಾವಗೀತೆ. ಸನ್ಮಾನ ಸತ್ಕಾರಗಳ ಮೂಲ ಉದ್ದೇಶ ನಡೆವ ಹೆಜ್ಜೆಗಳಿಗೆ ಹುರುಪು ತುಂಬುವುದೇ ವಿನಹ ಮೈಮರೆಸುವುದಲ್ಲ. ಲೋಕ ಸನ್ಮಾನಿಸುವುದು ನಿಮ್ಮ ಕಾಯಕವನ್ನಷ್ಟೇ ವಿನಹ ಕಾಯವನ್ನಲ್ಲ. ಹೊಗಳಿಕೆಗೆ ಮೆರೆಯದೆ, ಹಾದಿಯ ಮರೆಯದೆ ನಡೆವವರಷ್ಟೆ ಇಲ್ಲಿ ದೀಪ್ತಿಯಾಗುತ್ತಾರೆ. ಅವರ ಆ ನಡಿಗೆಯಷ್ಟೇ ಕೀರ್ತಿಯಾಗುತ್ತದೆ ಎಂದು‌ ಹೇಳುತ್ತಾರೆ ಕವಿ ಎ.ಎನ್.ರಮೇಶ್. ಗುಬ್ಬಿ ಅವರು!👇

👉ನಿತ್ಯಸತ್ಯ ವಾಸ್ತವ.!👈

ಹಾಕಿದ ಹಾರ ಮರುದಿನಕೆ ಬಾಡುವುದು
ಹೊದಿಸಿದ ಶಾಲು ತಿಂಗಳಿಗೆ ಹರಿವುದು
ತೊಡಿಸಿದ ಪೇಟ ವರ್ಷಕೇ ಹಾಳಾಗುವುದು
ಕೊಟ್ಟ ಫಲಕ ಕಾಲಕ್ರಮೇಣ ಮುರಿವುದು.!

ಹೊಗಳಿಕೆ ಮಾತು ಗಾಳಿಜೊತೆಗೆ ಹಾರಿತು
ಚಪಾಳೆ ಸದ್ದು ಆ ಕ್ಷಣಕೆ ಕರಗಿಹೋಯಿತು
ಪಟ ಹೊಡೆಸಿಕೊಂಡವರು ಮನೆ ಸೇರಿದರು
ಬಂದವರು ಮರಳಿ ತಮ್ಮ ದಾರಿಗೆ ಜಾರಿದರು.!

ಸಭೆ ಮುಗಿದ ಮೇಲೆ ನಿನ್ನಾರು ನೆನೆದಾರು
ಆದರಿಸಿದವರೇ ಕಡೆಗೊಮ್ಮೆ ನಿನ್ನ ಮರೆತಾರು
ಮತ್ತೇಕೆ ಬೀಗುವೆ ಸುಖಾಸುಮ್ಮನೆ ಮನವೆ.?
ಭುಜಗಳ ಮೇಲೆ ಸ್ಥಿರವಾಗಿ ನಿಲ್ಲು ಶಿರವೆ.!

ಪ್ರಶಸ್ತಿ ಗೌರವ ಪುರಸ್ಕಾರಗಳ ಆ ಡಂಗುರ
ಸಮಾರಂಭ ಸಡಗರ ಸನ್ಮಾನ ಆ ಸತ್ಕಾರ
ಮಾಡಿದ ಕೆಲಸಗಳಿಷ್ಟೆ ಮಾಡಿದ ಜೀವಕಲ್ಲ
ಬರೆದ ಕವಿತೆಗಳಿಗಷ್ಟೇ.. ಬರೆದ ಕವಿಗಲ್ಲ.!

ಪೇಟ ಶಾಲು ಹಾರಗಳ ಭಾರಕೆ ಬಾಗದೆ
ಕರತಾಡನದಿ ಮೈಮರೆಯದೆ ಸಾಗಬೇಕು
ಸಮ್ಮಾನಗರಿಯ ಸ್ಫೂರ್ತಿಯಾಗಿಸಿಕೊಂಡು
ಸಾಧನೆಹಾದಿಯಲಿ ಸದಾ ನಡೆಯಬೇಕು.!

ಪ್ರಜ್ವಲಿಸುತ್ತಿದ್ದರಷ್ಟೇ ಹಣತೆಯದು ಪೂಜ್ಯ
ಜ್ಯೋತಿಯಿಲ್ಲದಾ ಪ್ರಣತೆಗೆಲ್ಲಿದೆ ಮೌಲ್ಯ.?
ವಂದನೆಗೆ ಮೈಮರೆಯದೆ ಉರಿಯಲೇಬೇಕು
ಆರದಂತೆ ನಿರಂತರ ನೀಡಲೇಬೇಕು ಬೆಳಕು.!

ಕಾವ್ಯಪ್ರಭೆಯಿರುವರೆಗಷ್ಟೇ ಕವಿಯು ಮಾನ್ಯ
ಪ್ರಶಸ್ತಿಸಂತೆಯಲಿ ಕಳೆದುಹೋಗುವುದಕಿಂತ
ಕೂಡಿಕೊಳ್ಳಬೇಕು ಅನವರತ ಅಕ್ಷರಗಳ ಸಖ್ಯ
ಬರೆದ ಅಕ್ಷರ ಪಡೆದ ಪ್ರೀತಿಯಷ್ಟೇ ಚಿರಸತ್ಯ.!


-ಎ.ಎನ್.ರಮೇಶ್. ಗುಬ್ಬಿ.
*****