ಅವಳ ಸ್ವಗತ
‘ನೀನು ಮೊದಲು ಹೀಗಿರಲಿಲ್ಲ’…
ಪ್ರತಿ ಮಾತಿಗೂ ತಲೆಯಾಡಿಸುವ ಬಸವನಂತೆ,
ಪ್ರತಿ ಮುಂಜಾನೆ ಅರಳುವ ಪ್ರಫುಲ್ಲ ಹೂವಿನಂತೆ
ಸದಾ ನಗುತ್ತಿರುತ್ತಿದ್ದೆ
ಎಂದಿಗೂ’ ಉಹೂಂ ‘ಎಂದವನೇ ಅಲ್ಲ.
‘ನೀನು ಮೊದಲು ಹೀಗಿರಲಿಲ್ಲ’…
ನನ್ನ ಹಾಡಿನ ದನಿಗೆ ಕಿವಿಯಾಗುತ್ತಿದ್ದೆ
ನಾನು ಅಗತ್ಯವಿಲ್ಲದೆಯೂ ಸತಾಯಿಸುತ್ತಿದ್ದೆ,
ಕೆಲಸವಿಲ್ಲದೆಯೂ ಕಾಯಿಸುತ್ತಿದ್ದೆ
ಒಮ್ಮೆಯೂ ಬೇಸರಿಸಿದವನೇ ಅಲ್ಲ.
ಥೇಟ್ ಮಗುವಿನ ಮನದ ನಲ್ಲ.
ಈಗೀಗ ಅನ್ನಿಸುತ್ತಿದೆ…
ನೀನು ಬದಲಾಗಿದ್ದೀ
ಕ್ಷಣಕ್ಕೊಮ್ಮೆ ಸಿಡುಕುವ,
ದಾಕ್ಷಿಣ್ಯಕ್ಕೂ ನಸುನಗದ,
ಮಹಾ ಜ್ಞಾನಿಯಂತೆ ಮುಗಮ್ಮು.
ಆಕಾಶವನ್ನೇ ಹೊತ್ತ ನಿರ್ಲಿಪ್ತ.
ಹೀಗೆಯೂ ಅನ್ನಿಸುತ್ತಿದೆ…
ಯಾರದೋ ದೃಷ್ಟಿ ತಾಗಿರಬೇಕು,
ಮೂರು ದಾರಿ ಕೂಡುವ ಸ್ಥಳದ ದಾಟು ಹಾಯ್ದಿರಬೇಕು,
ಯಾವುದೋ ಅನುಮಾನದ ಹುಳ ಹೊಕ್ಕಿರಬೇಕು ಅಥವಾ ಯಾರೋ ತಲೆ ಕೆಡಿಸಿರಬೇಕು.
ನಕ್ಕು ಬಿಡು ಗೆಳೆಯ ಮನಬಿಚ್ಚಿ ಮುಗುಳಿನಲಿ
ಉದುರಿಹೋಗಲಿ ಬಿಂಕ , ದುಗುಡ, ದುಮ್ಮಾನ
ಮರೆತುಬಿಡು ನೋವ ಕೆಟ್ಟ ಕನಸಿನ ಹಾಗೆ
ನಾಳೆಗಳು ಮತ್ತೊಮ್ಮೆ ಹಲ್ಕಿರಿಯಲಿ.
-ಮಧುಸೂದನ ಬೆಳಗುಲಿ, ಮಡಿಕೇರಿ
*****