ವೈದ್ಯರ ಬಿಳಿ ಕೋಟ್ ರೋಗಿಯ ವಿಶ್ವಾಸ ನಂಬಿಕೆಯ ಪ್ರತೀಕ: ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಹೊಸೂರು

ಬಳ್ಳಾರಿ ಜು 25 : ಗಾಂಧಿ ಟೋಪಿ ಸತ್ಯದ ಪ್ರತೀಕವಾಗಿರುವಂತೆ ವೈದ್ಯರ ಬಿಳಿ ಕೋಟ್ ರೋಗಿಯ ನಂಬಿಕೆ, ವಿಶ್ವಾಸದ ಪ್ರತೀಕ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಗೋಪಾಲ್ ಬಿ. ಹೊಸೂರು ಅವರು ಹೇಳಿದರು.
ಭಾನುವಾರ ಸಂಜೆ ನಗರದ ಬಿಐಟಿಎಂ ಕಾಲೇಜಿನ ಸಭಾಂಗಣದಲ್ಲಿ ಐಎಂಎ ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವೈದ್ಯರು ರೋಗಿಗಳ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳಲು ನಿರಂತರ ಶ್ರದ್ಧೆ, ಕಾರ್ಯಕ್ಷಮತೆಯನ್ನು ಹೊಂದಿರಬೇಕು ಎಂದು ತಿಳಿಸಿದರು.
ವೈದ್ಯರು ರೋಗಿಗಳಿಗೆ ಏನೆಲ್ಲಾ ಓದಿ ಔಷಧಿಕೊಡುವುದರ ಜೊತೆಗೆ ಅವರೊಂದಿಗೆ ಹೇಗೆ ನಡೆದು ಕೊಂಡರೆ ರೋಗ ನಿವಾರಣೆಗೆ ಸಹಕಾರಿ ಆಗಬಲ್ಲದು ಎಂಬುದನ್ನು ತಮ್ಮ ಜೀವನದ ಅನುಭವಗಳೊಂದಿಗೆ ವಿವರಿಸಿದರು.
ವೀರಪ್ಪನ್ನ ತಂಡದ ಬಂದೂಕಿನ ಬುಲೆಟ್ ನಿಂದ ತಾವು ಗಾಯಗೊಂಡು ಇಂದಿಗೂ ಜೀವಂತವಾಗಿರಲು ವೈದ್ಯರೇ ಕಾರಣ ಅದಕ್ಕಾಗಿ ನಾನು ವೈದ್ಯರನ್ನು ದೇವರು ಭಾವಿಸಿರುವೆ ಎಂದು ಭಾವುಕರಾದರು.
ಬಳ್ಳಾರಿ ಜಿಲ್ಲಾ ಎಸ್.ಪಿ ಯಾಗಿದ್ದ ದಿನಗಳನ್ನು ಸ್ಮರಿಸಿಕೊಂಡರು.
ನೈರುತ್ಯ ರೈಲ್ವೆ ವಲಯದ ಉಪ ಆರ್ಥಿಕ ಸಲಹೆಗಾರ,
ಶ್ರೇಯಸ್ ಜಿ.ಹೊಸೂರು ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ. ಬಳ್ಳಾರಿಯಲ್ಲಿ ಮೂರು ವರ್ಷಗಳ ಕಾಲ ನಾನು ಬಾಲ್ಯದ ದಿನಗಳನ್ನು ಕಳೆದಿದ್ದೆ. ನನ್ನ ಕ್ರೀಡಾ ಸಾಧನೆಗೆ ಪರೋಕ್ಷವಾಗಿ ವೈದ್ಯರ ಸಹಕಾರವಿದೆ. ಕೋವಿಡ್ ಸಂದರ್ಭದಲ್ಲಿ ವೈದ್ಯರ ಸಹಕಾರವನ್ನು ಯಾರೂ ಮರೆಯಲಾಗದಂತಹುದು ಎಂದರು.
ವೈದ್ಯಕೀಯ ರಂಗ ಇಂದು ಎಲ್ಲಾ ಹಂತದಲ್ಲಿ ವಿಶೇಷತೆಯನ್ನು ಅಳವಡಿಸಿ ಕೊಂಡಿದೆ. ಆದರೆ ಆರೋಗ್ಯ ವ್ಯವಸ್ಥೆ ಕಾರ್ಪೊರೇಟ್ ಕಂಪನಿಗಳ‌ ಕಪಿಮುಷ್ಟಿಯಲ್ಲಿ ಸಿಲುಕಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಮತಹ ಸವಾಲಿನ ಸಂದರ್ಭದಲ್ಲಿ ವೈದ್ಯರ ಜವಾಬ್ದಾರಿಯೂ ಹೆಚ್ಚಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಬಿ.ಕೆ.ಸುಂದರ್ ಮಾತನಾಡಿ, ಸಂಘ
ಕೋವಿಡ್ ಕಾರಣದಿಂದ ಕೆಲ ವರ್ಷ ವೈದ್ಯರ ದಿನ ವನ್ನು ಆಚರಿಸರಲಿಲ್ಲ. ನಗರ ಸ್ವಚ್ಚತೆಗೆ ನಮ್ಮ ಸಂಘದಿಂದ ನಡೆಸಿದ ಪ್ರಯತ್ನ ಹಾಗೂ ಕೋವಿಡ್ ಸಮಯದಲ್ಲಿ ವೈದ್ಯರ ಸೇವೆಯನ್ನು ಸಮಾಜ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ. ತಿಪ್ಪಾರೆಡ್ಡಿ, ಡಾ.ಬಾಲಬಾಸ್ಕರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಜನಾರ್ಧನ, ಡಿಟಿಓ ಡಾ. ಇಂದ್ರಾಣಿ, ಡಾ.ಅನಿಲ್ ರಾಜೋಳಿ, ಹಿರಿಯ ಲೆಕ್ಕ ಪರಿಶೋಧಕ ಷಾಕಲ್ ಚಂದ್ ಬಾಗ್ರೇಚ, ಹಿರಿಯ ವಕೀಲರಾದ ಉಡೇದ ಬಸವರಾಜ್, ರಂಗನಟ,ಪತ್ರಿಕಾ ಛಾಯಾಗ್ರಹಕ ಹಂದ್ಯಾಳು ಪುರುಷೋತ್ತಮ, ವಿ ಕೇರ್ ಸಂಸ್ಥೆಯ ಅಧ್ಯಕ್ಷ ಮನ್ಸೂರು.
ಯುವ ಸಾಧಕರಾಗಿ ಈ ವರ್ಷದ 10 ನೇ ತರಗತಿಯ ( ಐಸಿಎಸ್ ಸಿ) ಪರೀಕ್ಷೆಯಲ್ಲಿ ದೇಶಕ್ಕೆ 3 ಸ್ಥಾನ ಪಡೆದ ಅನುಷ್ಕ ಬಿ.ಕರಣಂ, ನೀಟ್ ಪಿಜಿ ಪರೀಕ್ಷೆಯಲ್ಲಿ ದೇಶದಲ್ಲಿ 14 ನೇ ರ‌್ಯಾಂಕ್ ಪಡೆದ ಡಾ.ಅದಿತ್ ಹುಂಡೈ ಮತ್ತು ವಿಮ್ಸ್ ನಲ್ಲಿ ಎಂಬಿಬಿಎಸ್ ನಲ್ಲಿ ಮೊದಲ ರ‌್ಯಾಂಕ್ ಪಡೆದ ಡಾ. ಪ್ರಜ್ವಲ್ ಗುಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯದರ್ಶಿ ಡಾ. ನಿತೇಶ್ ಕಠಾರಿಯ, ಉಪಾಧ್ಯಕ್ಷೆ
ಡಾ.ರೇಣುಕಾ ಮಂಜುನಾಥ
ಕಾರ್ಯದರ್ಶಿ ಡಾ. ಚಂದ್ರಶೇಖರ್ ಪಾಟೀಲ್ , ಖಜಾಂಚಿ ಡಾ. ಭರತ್ ಮಹಿಪಾಲ್ , ಕಾರ್ಯಕ್ರಮದ ಸಂಯೋಜಕ ಡಾ.ಅರವಿಂದ ಪಾಟೀಲ್, ಕರ್ನಾಟಕ ವೈದ್ಯರ ಸಾಮಾಜಿಕ ಯೋಜನೆಗಳ ರಾಜ್ಯ ಅಧ್ಯಕ್ಷ ಡಾ.ಯೋಗಾನಂದರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.
ಡಾ.ಜಯಶ್ರೀ ನೇತೃತ್ವದ ತಂಡ ಪ್ರಾರ್ಥನೆ ನೆರವೇರಿಸಿತು.
ಸಮಾರಂಭದಲ್ಲಿ ವೈಧಯಕೀಯ ದಿನಾಚರಣೆ ಅಂಗವಾಗಿ ಸಂಘ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ವೈದ್ಯರು ಮತ್ತು ಕುಟುಂಬದ ಸದಸ್ಯರಿಂದ ನೃತ್ಯ, ಹಾಡುಗಾರಿಕೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.
*****