ಅನುದಿನ ಕವನ-೫೭೧, ಕವಯತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ:ಮತ್ತೊಂದು ಅವಕಾಶ ಸಿಗಬೇಕಿತ್ತು….

ಮತ್ತೊಂದು ಅವಕಾಶ ಸಿಗಬೇಕಿತ್ತು

ರಾಶಿ ರಾಶಿ ಪ್ರೀತಿ ಗಳಿಸಿದ್ದಿರಿ ನೀವು
ಅಷ್ಟೊಂದು ತೀವ್ರ ಅವಸರವೇನಿತ್ತು
ನಿಮಗೆ ಮತ್ತೊಂದು ಅವಕಾಶ ಸಿಗಬೇಕಿತ್ತು

ಎದೆಯ ಗೂಡಿನ ಬೆಳಗು ದೀಪ ಇಷ್ಟು
ಬೇಗ ಕಣ್ಕಟ್ಟಿನಂತೆ ಆರಿ ಹೋಗಬಾರದಿತ್ತು
ನಿಮಗೆ ಮತ್ತೊಂದು ಅವಕಾಶ ಸಿಗಬೇಕಿತ್ತು

ನಿಮ್ಮ ಅಂಗಳದಲ್ಲಿ ಆಶ್ರಯಿಸಿದ್ದ ಜೀವಗಳಿಗೆ
ಸಜ್ಜನ ಆಧಾರದ ಭರವಸೆಯಾಗಿದ್ದ ನೀವು
ಧಕ್ಕನೆ ಕಣ್ಮರೆಯಾಗಬಾರದಿತ್ತು
ನಿಮಗೆ ಮತ್ತೊಂದು ಅವಕಾಶ ಸಿಗಬೇಕಿತ್ತು

ನಗುವಿನ ಸರೋವರದಲ್ಲಿ ಬೆಳ್ಳಿಚಂದ್ರನಂತಿದ್ದ
ನೀವು ಉಳಿದವರ ಕಣ್ಣಲ್ಲಿ ಕಂಬನಿಯಾದದ್ದು
ಅನ್ಯಾಯ, ಇಷ್ಟು ಬೇಗ ತೆರಳಬಾರದಿತ್ತು.
ನಿಮಗೆ ಮತ್ತೊಂದು ಅವಕಾಶ ಸಿಗಬೇಕಿತ್ತು

ರಾಜಕುಮಾರನ ಠೀವಿಯ ಪ್ರಭಾವಳಿಯಲ್ಲಿ
ಸಾಮಾನ್ಯ ಹೃದಯ ಹೊತ್ತು ಸ್ಪಂದಿಸುತ್ತಿದ್ದ
ನಿಮಗೀ ಮರಣ ಅನಿವಾರ್ಯವಾಗಬಾರದಿತ್ತು
ನಿಮಗೆ ಮತ್ತೊಂದು ಅವಕಾಶ ಸಿಗಬೇಕಿತ್ತು

ಅಸಮಾನ್ಯ ಜೀವಚೈತನ್ಯವೊಂದು ಏಕಾಏಕಿ ಅಸಾಧ್ಯ ನೋವೊಂದನ್ನು ಸ್ಪೋಟಿಸಬಾರದಿತ್ತು.
ಪುನೀತ ಹೃದಯವೇ ಪವಾಡದಂತಹ ಅಸಾಧಾರಣ ಅವಕಾಶ ನಿಮಗೆ ಮತ್ತೊಮ್ಮೆ ಸಿಗಬೇಕಿತ್ತು

ಆ ನಿರ್ಮಲ ನಗು ಕಾಣುವಂತಹ ಅವಕಾಶವೊಂದು ನಮಗೂ ಸಿಗಬೇಕಿತ್ತು, ಸಿಗಲೇಬೇಕಿತ್ತು

-ಮಮತಾ ಅರಸೀಕೆರೆ, ಹಾಸನ‌ ಜಿಲ್ಲೆ.