ಅನುದಿನ ಕವನ-೫೭೨, ಕವಯತ್ರಿ: ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ, ಕಾವ್ಯ ಪ್ರಕಾರ: ಗಜಲ್

ಗಜಲ್

ರೆಕ್ಕೆ ಬಂದಿದೆ ಕನಸಿನ ಹಕ್ಕಿಗೆ
ಹಾರದು ನಿನ್ನ ಬಿಟ್ಟು ಬಾನಿನೆಡೆಗೆ
ಆಗರದ ಓಗರವು ಮೇಲೇರಿ ಇಳಿದು
ನಿಲ್ಲಲೊಲ್ಲದು ಹರಿದು ತಟದೆಡೆಗೆ

ಹಣತೆಯ ಬತ್ತಿಯಲಿ ದೀಪ ಉರಿದಿದೆ
ಕರೆದೊಯ್ಯದು ತಮಂಧದಾಚಗೆ
ಧರಣಿಯು ಮನುಜನ ಸಹಿಸಿಕೊಂಡಿದೆ
ಅತಿಯಾದರೆ ನೂಕುವುದು ಶೂನ್ಯದೆಡೆಗೆ

ಜ್ಞಾನಾಮೃತ ಉಣಿಸಿದೆ ಅನುಭವದರಿವು
ಬಡಿದಾಡುತಿಹರೆಲ್ಲರು ಸ್ವಾರ್ಥದಸಿವು
ಹೋಗುವುದಿದೆ ಎಂದರಿತಾಗಲೂ
ಜಗ್ಗುವುದು ಜೀವವು ಬದುಕಿನೆಡೆಗೆ

ನನ್ನದೆಂಬುದೇನಿದೆ ಎಲ್ಲ ನಶ್ವರ
ಈಶ್ವರನೊಲುಮೆಯಿರೆ ಶಾಂತಸಾಗರ
ಮರುಜನುಮವಿಲ್ಲ ಕೇಳು ಇದೇ ಕೊನೆ
ಮುಖಮಾಡಿ ಕುಳಿತಿಹೆವು ಬಂಧನದೆಡೆಗೆ

ಆಳ ಅಗಲಗಳ ಅರಿತು ಇಳಿಯಬೇಕು ರತುನ
ಬಾಳ ಕೊನೆಯವರೆಗೂ ಈಸಬೇಕು
ಸತ್ಯ ಹೇಳುವವರ ಮಾತ ನಂಬಬೇಕು
ಸರಿದು ಕೂಡಬೇಕು ಸಂತರ ಪಾದದೆಡೆಗೆ


-ಡಾ. ನಾಗರತ್ನ ಅಶೋಕ ಭಾವಿಕಟ್ಟಿ, ಹುನಗುಂದ
*****