ಗಜಲ್
ಎದೆಯೊಳಗೆ ಚಿಮ್ಮಿದವು ಸಾವಿರ ಹಕ್ಕಿಗಳು ಜತೆಯಲಿರುವಾಗ ನೀನು
ಮನದೊಳಗೆ ನಲಿದವು ಸಾವಿರ ನವಿಲುಗಳು ಜತೆಯಲಿರುವಾಗ ನೀನು
–
ಪ್ರೀತಿಯೆಂಬ ಪದವೂ ಹಳತಾಗಿ ಹೋಯಿತು ನಿನ್ನ ಸಾಮೀಪ್ಯದಲಿ
ಮಾತುಗಳೂ ಸೇರಿದವು ಮೌನದ ಒಡಲೊಳು ಜತೆಯಲಿರುವಾಗ ನೀನು
–
ಎಲ್ಲಿ ಹೇಗೆ ಏಕೆ ಒಲವು ಮೂಡಿತೆಂಬುದ ಒರೆಗೆ ಹಚ್ಚಲೇಕೆ ಇನ್ನು
ಒಲುಮೆಯೆ ಉಸಿರಾಯಿತು ಜಗದೊಳು ಜತೆಯಲಿರುವಾಗ ನೀನು
–
ಕಳೆವ ಪ್ರತಿ ಚಣಗಳು ಹೊಸ ಚಣಗಳಿಗೆ ಸಾಕ್ಷಿಯಾಗತೊಡಗಿಹವು
ಕವಿತೆಯೇ ರೂಪುಗೊಂಡಿತು ಕಾಲದೊಳು ಜತೆಯಲಿರುವಾಗ ನೀನು
–
ಜಗದಲಿ ಅದೆಷ್ಟು ಪ್ರೀತಿಯ ನೋವು ನಲಿವು ಬೆರೆತಿಹವೊ ಅರಿಯೆನು
ಸಿದ್ಧನ ಬದುಕೇ ಸೇರಿತು ನಿನ್ನುಸಿರೊಳು ಜತೆಯಲಿರುವಾಗ ನೀನು
-ಸಿದ್ಧರಾಮ ಕೂಡ್ಲಿಗಿ
***** [Sketch & Gajal: Siddharam kudligi]