ಅನುದಿನ‌ ಕವನ-೫೭೯, ಕವಯತ್ರಿ: ಶ್ರೀ (ಶ್ರೀಲಕ್ಷ್ಮಿ ಅದ್ಯಪಾಡಿ, ಮಂಗಳೂರು) ಕವನದ ಶೀರ್ಷಿಕೆ: ಮೌನ ಆಲಾಪ

ಮೌನ ಆಲಾಪ….

ಇಂದೇಕೋ ಶರಧಿಯಲ್ಲಿ ಅಲೆಗಳೇ ಇಲ್ಲ
ಗಾಳಿಗುಂಟ ನಲಿಯುವುದ ಮರೆತಿರುವಳೋ ಏನೋ

ಇಂದೇಕೋ ಅಬ್ಬರದ ಹೊಯ್ದಾಟಗಳೇ ಇಲ್ಲ
ಸಹನಶೀಲತೆಯೇ ನಿಶ್ಯಬ್ದವಾಗಿಹುದೋ ಏನೋ

ತೀರಕ್ಕೆ ಬಡಿದ ಕನಸುಗಳ ಅಲೆಗಳು
ತಿರುತಿರುಗಿ ಮತ್ತೆ ಒಡಲ ಸೇರುತ್ತಿವೆ
ತಾಳ್ಮೆಯೂ ಹೆಪ್ಪುಗಟ್ಟಿದ ಪರಿಯೋ ಏನೋ

ಹರಡಿರುವ ಮರಳ ಹಾಸು ನಿಡುಸುಯ್ಯುತಿದೆ
ಇಳಿ ಸಂಜೆಯ ಗಾಳಿಯೂ ಸುಡುತ್ತಿವೆ
ಬಿಕ್ಕುತ್ತಿರುವ ನಿಟ್ಟುಸಿರ ಧಗೆಗೋ ಏನೋ

ಶಾಂತತೆಯೇ ಮೈವೆತ್ತಂತೆ ತೋರುತ್ತಿರುವಳು ಇಂದು
ನಾಳಿನ ಚಿಂತೆಗಳ ಭಾರವೋ ಏನೋ

ಜಗದ ನಿಯಮಗಳು ಇಂಚಿಂಚೇ ಕೊಲ್ಲುತ್ತಿವೆ
ನೋವಿನ ಪರಿವೆಯೇ ಇಲ್ಲದಂತೆ ಸ್ತಬ್ಧವಾಗಿಹಳೋ ಏನೋ..

– ಶ್ರೀ
(ಶ್ರೀಲಕ್ಷ್ಮಿ ಅದ್ಯಪಾಡಿ, ಮಂಗಳೂರು)
*****