ಅನುದಿನ‌ ಕವನ-೫೮೦, ಕವಿ: ಮಹಿಮ, ಬಳ್ಳಾರಿ, ಕವನದ ಶೀರ್ಷಿಕೆ:ಯಾಕೋ…!?

ಯಾಕೋ….!?

ಎಲ್ಲವೂ ಖಾಲಿಯಾಗಿದೆ
ನನ್ನೊಳಗೇನಿಲ್ಲ
ಏನೂ ಉಳಿದಿಲ್ಲ

ಖಾಲಿಯವನೆಂದು
ಖಾಲಿ ಕೈಯವನೆಂದು
ಜರಿದ ಜನರೆಷ್ಟೋ ಜನ
ದೂರಮಾಡಿಕೊಂಡವರೆಷ್ಟೋ ಜನ

ನನಗದು ಖುಷಿ
ಮತ್ತೆ ನನಗದು ಹೆಮ್ಮೆ
ಅವರು ನನ್ನ ಖಾಲಿ ಎಂದು ಜರಿದುದಕ್ಕೆ
ಖಾಲಿ ನಾನೆಂದು ನನಗೆ
ಮತ್ತೆ ಮತ್ತೆ
ಗೊತ್ತುಮಾಡಿಸಿದುದಕ್ಕೆ

ಉಳಿದಿರುವುದು ಮೈಮೇಲಿನ ಬಟ್ಟೆ
ಕಾಯಕ ಕೊಡುವ ನಿತ್ಯಾನ್ನ
ಮತ್ತೇನೂ ಇಲ್ಲ
ಮತ್ತೆ ಏನೂ ನನಗೆ ಬೇಕಿಲ್ಲ ‌

ಖಾಲಿಯಾಗುವುದಕ್ಕೆ ಮುನ್ನ
ಖಾಲಿಯಾದುದಕ್ಕೆ
ನನಗೇನೋ ಖುಷಿ..
ಮನ ಹಗುರ..

ಇಳೆಯ ಬದುಕಿಷ್ಟೇ
ಗಳಿಸಿದ್ದುದೆಲ್ಲ ಆಟಿಕೆಗಳು

ಇರುಳಾದ ಮೇಲೆ ನಿದ್ರೆಗೆ ಜಾರುವ ಮಗುವಿಗೆ ಆಟಿಕೆಗಳು
ಅನಗತ್ಯ

ನಿದ್ದೆಗೆ ಜಾರುವ ಮೊದಲೇ
ನನ್ನಾಟಿಕೆಗಳೆಲ್ಲ ಖಾಲಿಯಾಗಿ ಹೋಗಿವೆ
ಇನ್ನು ಬರಬೇಕಾದ ನಿದ್ದೆ ಯಾಕೋ ಬರುತ್ತಿಲ್ಲ?

– ಮಹಿಮ, ಬಳ್ಳಾರಿ
*****