ಬಳ್ಳಾರಿ ವೈದ್ಯ ದಂಪತಿ ವಿಶಿಷ್ಟ ಪುಸ್ತಕ ಪ್ರೇಮ: ಪುತ್ರನ ಹುಟ್ಟುಹಬ್ಬಕ್ಕೆ ನೂರಕ್ಕೂ ಹೆಚ್ಚು ಪುಸ್ತಕ‌ ಉಡುಗೊರೆ!

ಬಳ್ಳಾರಿ, ಆ.4: ನಗರದ ಹೆಸರಾಂತ ನೇತ್ರ ತಜ್ಞರಾದ ಡಾ.ವಿಜಯ್ ನಾಗರಾಜ ಮತ್ತು ಡಾ.ಗೀತಾ ದಂಪತಿ ಪುಸ್ತಕ ಪ್ರೇಮ‌ಕ್ಕೆ ಸಾಹಿತ್ಯ ಆಸಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಹೌದು! ವೈದ್ಯ ದಂಪತಿ ಗುರುವಾರ ಸಂಜೆ ನಗರದಲ್ಲಿ ಜರುಗಿದ ತಮ್ಮ ಪುತ್ರ ಋತ್ವಿಕ್ ಹುಟ್ಟು ಹಬ್ಬದಲ್ಲಿ ಹಿರಿಯ ಪತ್ರಕರ್ತ, ಸಾಹಿತಿ ಚಂದ್ರಕಾಂತ ವಡ್ಡು‌ ಅವರು ಸಂಪಾದಿಸಿರುವ ‘ಸೌಹಾರ್ದ ಕರ್ನಾಟಕ’ ಕೃತಿಯನ್ನು ಸಾಂಕೇತಿಕವಾಗಿ ಬಿಡುಗಡೆ ಮಾಡಿದರು. ಮಾತ್ರವಲ್ಲ ಪ್ರಕಾಶಕರಿಂದ ಪುಸ್ತಕ ಖರೀದಿಸಿ, ಕಾರ್ಯಕ್ರಮದಲ್ಲಿ‌ ಪಾಲ್ಗೊಂಡಿದ್ದ ಗಣ್ಯ ಅತಿಥಿಗಳು ಹಾಗೂ ನೂರಕ್ಕೂ ಹೆಚ್ಚು ಆಹ್ವಾನಿತರಿಗೆ ಉಡುಗೊರೆ ರೂಪದಲ್ಲಿ‌ ನೀಡಿದ್ದು ಗಮನ ಸೆಳೆಯಿತು.
ಈ‌ ಮೂಲಕ ಕೃತಿ ಅರ್ಥಪೂರ್ಣ ಉಡುಗೊರೆ ರೂಪದಲ್ಲಿ ನೂರಾರು ಅತಿಥಿಗಳ ಮನೆ-ಮನ ಸೇರಿತು.
ವೈದ್ಯಕೀಯ ಸೇವೆ ಜೊತೆಗೆ ಪುಸ್ತಕ ಸಂಸ್ಕೃತಿ, ಸೌಹಾರ್ದ ಪರಂಪರೆ ಹರಡುತ್ತಿರುವ ಕೊಂಡ್ಲಹಳ್ಳಿ ಮೂಲದ ಹಿರಿಯ ವೈದ್ಯರಾದ ಡಾ.ನಾಗರಾಜ ಕುಟುಂಬದ ಕಾರ್ಯ ವಿಶಿಷ್ಟವಾದುದು.
*****