ನನ್ನದೇನು ಅಭ್ಯಂತರವಿಲ್ಲ
ನನ್ನದೇನು ಅಭ್ಯಂತರವಿಲ್ಲ
ನೀ ನಿನ್ನಿಷ್ಟದಂತೆಯೇ ಇರು;
ಈಗಿನಂತೆಯೇ ಬಟ್ಟೆ ತೊಡು,
ಆದರೆ, ತೋಳಿಲ್ಲದ, ಮೊಣಕಾಲುಗಳು
ಕಾಣಿಸುವಂತವು ಬೇಡವಷ್ಟೇ…
ನನ್ನದೇನು ಅಭ್ಯಂತರವಿಲ್ಲ
ನೀ ನಿನ್ನಿಷ್ಟದಂತೆಯೇ ಇರು;
ಕಣ್ಣಿಗೆ ಕಾಡಿಗೆ, ತುಟಿಗೆ ಬಣ್ಣ ಹಚ್ಚು
ಆದರೆ, ಹಣೆಗೆ ಬೊಟ್ಟು ಇಡಲೇಬೇಕಷ್ಟೇ…
ನನ್ನದೇನು ಅಭ್ಯಂತರವಿಲ್ಲ
ನೀ ನಿನ್ನಿಷ್ಟದಂತೆಯೇ ಇರು;
ಚೂಡಿದಾರ್ ನಿನಗೆ ಅಂದವಾಗಿಯೇ ಕಾಣಿಸುತ್ತದೆ.
ಆದರೆ, ನಿನ್ನ ಬಯಲಿನಂತ ಬೆನ್ನು ಕಾಣಿಸಬಾರದಷ್ಟೇ…
ನನ್ನದೇನು ಅಭ್ಯಂತರವಿಲ್ಲ
ನೀ ನಿನ್ನಿಷ್ಟದಂತೆಯೇ ಇರು;
ನಿನ್ನ ಮೈಮಾಟಕ್ಕೆ ಅಂಟಿದಂತೆ ಹೊಲಿಸಿರುವೆಯಲ್ಲ ಅದೇ ಅನಾರ್ಕಲಿ.
ಅದು ತೊಟ್ಟಾಗ ಮೈ ಮೇಲೆ ವೇಲ್ ಹಾಕೋದು ಮರಿಯಬೇಡಷ್ಟೇ..
ನನ್ನದೇನು ಅಭ್ಯಂತರವಿಲ್ಲ
ನೀ ನಿನ್ನಿಷ್ಟದಂತೆಯೇ ಇರು;
ಸೀರೆ ಚೆಂದವೇ ಕಾಣಿಸುತ್ತದೆ ನಿನಗೆ,
ಆದರೆ, ರವಿಕೆಗೆ ಡೀಪ್ ಜಾಸ್ತಿ ಬೇಡವಷ್ಟೇ….
ನನ್ನದೇನು ಅಭ್ಯಂತರವಿಲ್ಲ
ನೀ ನಿನ್ನಿಷ್ಟದಂತೆಯೇ ಇರು
ಮೊನ್ನೆ ಹಾಕೊಂಡಿದ್ದಲ್ಲ ತಿಳಿ ಗುಲಾಬಿ ಬಣ್ಣದ ಸೀರೆ ಸೂಪರ್.
ಆದರೆ, ಉಬ್ಬು ತಗ್ಗುಗಳು ಕಾಣಿಸದಂತೆ ಮೈ ತುಂಬ ಸೆರಗು ಹೊದ್ದುಕೋ ಅಷ್ಟೇ..
ನನ್ನದೇನು ಅಭ್ಯಂತರವಿಲ್ಲ
ನೀ ನಿನ್ನಿಷ್ಟದಂತೆಯೇ ಇರು;
ನಿನ್ನ ಜೊತೆ ಕೆಲಸ ಮಾಡ್ತಾನಲ್ಲ “ಅವ” ತುಂಬಾ ಒಳ್ಳೆಯವನೇ.
ಆದರೆ, ತಡವಾಯಿತು ಎಂದು ಅವನ ಬೈಕ್ ಏರಿ ಬರಬೇಡವಷ್ಟೇ..
-ಮಂಜುಳ ಕಿರುಗಾವಲು, ಮಂಡ್ಯ
*****